ಸಚಿವ ಡಿಕೆಶಿ ತಾಯಿ ಗೌರಮ್ಮಗೆ ಹೈಕೋರ್ಟ್​​ನಿಂದ ರಿಲೀಫ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯ ಬೆನಾಮಿ ಸೆಲ್ ನಿಂದ ಗೌರಮ್ಮ ಅವರಿಗೆ ನೋಟಿಸ್ ನೀಡಲಾಗಿತ್ತು.

ಈ ನೋಟಿಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ. ಜತೆಗೆ ಗೌರಮ್ಮನವರ ವಿರುದ್ಧ ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಸದ್ಯಕ್ಕೆ ನಿಲ್ಲಿಸುವಂತೆ ಸೂಚನೆ ನೀಡಿದೆ.

ಆದಾಯ ತೆರಿಗೆ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 22 ರಂದು ನೋಟಿಸ್ ನೀಡಿತ್ತು. 90 ದಿನಗಳ ಒಳಗಾಗಿ ಈ ನೋಟಿಸ್ ಗೆ ವಿವರಣೆ ನೀಡುವಂತೆ ಸೂಚಿಸಿತ್ತು. ಅದರ ಪ್ರಕಾರ ಇದೇ ತಿಂಗಳು 22ರ ಒಳಗಾಗಿ ವಿವರಣೆ ನೀಡಬೇಕಿತ್ತು.

ತೆರಿಗೆ ಇಲಾಖೆಯ ನೋಟಿಸ್ ರದ್ದುಗೊಳಿಸಬೇಕು ಎಂದು ಕೋರಿ ಗೌರಮ್ಮ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಗೌರಮ್ಮ ಹಾಗೂ ಅವರ ಕುಟುಂಬ ಸದಸ್ಯರು ಸಾಕಷ್ಟು ಜಮೀನು ಹೊಂದಿದ್ದು, ಕೃಷಿಯಿಂದ ಹಣ ಸಂಪಾದನೆ ಮಾಡಲಾಗಿದೆ.

2016 ರಲ್ಲಿ ಬೇನಾಮಿ ಆಸ್ತಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಗೌರಮ್ಮ ವಿರುದ್ಧದ ಪ್ರಕರಣದಲ್ಲಿ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ವಕೀಲರು ವಾದ ಮಂಡಿಸಿದರು. ಈ ವಾದ ಆಲಿಸಿದ ನ್ಯಾಯಾಲಯ ಪ್ರತಿವಾದಿ ಐಟಿ ಸೆಲ್ ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.

Facebook Comments

Sri Raghav

Admin