‘ಕಾರು-ಮನೆ ಬೇಕಾದವರು ವಿಪಕ್ಷ ನಾಯಕರಾಗಲಿ’ : ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಗುದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.25-ಕಾರು, ಮನೆ ಬೇಕಾದವರು ಮತ್ತು ಅರ್ಜೆಂಟ್ ಇರೋವರು ವಿರೋಧ ಪಕ್ಷದ ನಾಯಕರಾಗಲಿ. ನನಗೆ ಯಾವುದೇ ಅಧಿಕಾರವೂ ಬೇಡ. ನನಗೆ ಸ್ವಂತ ಮನೆ ಸಾಕು ಎಂದು ಹೇಳುವ ಮೂಲಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಲವು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ತಮ್ಮ ಮನೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸ್ಥಾನ ಸೇರಿದಂತೆ ಯಾವುದೇ ಅಧಿಕಾರ ನನಗೆ ಬೇಡ. ಸದ್ಯಕ್ಕೆ ನನ್ನನ್ನು ನನ್ನ ಪಾಡಿಗೆ ಫ್ರೀಯಾಗಿರಲು ಬಿಟ್ಟರೆ ಸಾಕು. ಬಹಳಷ್ಟು ಮಂದಿಗೆ ಅರ್ಜೆಂಟ್ ಇದೆ. ಏನೇನೋ ಬೇಕು ಎಂಬ ತುಡಿತ ಇದೆ. ಅಂಥವರು ಹೋಗಿ ಅವಕಾಶ ಗಿಟ್ಟಿಸಿಕೊಳ್ಳಲಿ ಎಂದರು.

ಕಾರು, ಮನೆ ಬೇಕಾದವರು ಪ್ರಯತ್ನ ಮಾಡಲಿ. ನನಗಂತೂ ಸ್ವಂತ ಮನೆ ಇದೆ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು. ನಾಳೆ ಹೈಕಮಾಂಡ್‍ನಿಂದ ವೀಕ್ಷಕರು ಬಂದು ಎಲ್ಲರ ಜೊತೆ ಸಮಾಲೋಚನೆ ಮಾಡಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಷಯವಾಗಿ ಪಕ್ಷಕ್ಕೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರಸರ್ಕಾರದ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರುಗಳು ಏನೇನೋ ಮಾತನಾಡಿದ್ದಾರಂತೆ. ನನಗೆ ಅದ್ಯಾವುದೂ ಗೊತ್ತಿಲ್ಲ. ಸದ್ಯಕ್ಕೆ ನಾನು ಪೇಪರ್ ಓದುವುದನ್ನೇ ಬಿಟ್ಟಿದ್ದೇನೆ.

ಕೆಲವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಹೇಳಿದರು.ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಹೇಳಿಕೆಗಳಿಗೆ ಉತ್ತರ ನೀಡುವಷ್ಟು ಸಮಯ ನನ್ನ ಬಳಿಯಿಲ್ಲ ಎಂದು ಪ್ರತಿಕ್ರಿಯಿಸಿದರು.

ಹದಿನಾಲ್ಕು ತಿಂಗಳ ಕಾಲ ಮುಖ್ಯಮಂತ್ರಿಯ ಕೈಕೆಳಗೆ ನಾನು ಸಚಿವನಾಗಿ ಇಲಾಖೆಯ ಜವಾಬ್ದಾರಿ ನಿಭಾಯಿಸಿದ್ದೇನೆ. ನಾನು ನಿರ್ವಹಿಸಿದ ಇಲಾಖೆ ವಿಷಯಗಳ ಕುರಿತಂತೆ ಯಾವುದೇ ಚರ್ಚೆಗಳು ಬಂದರೂ ಅದಕ್ಕೆ ಪ್ರತಿಕ್ರಿಯಿಸಲು ನಾನು ಬದ್ಧ ಎಂದು ಅವರು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಅರುಣ್‍ಜೇಟ್ಲಿಯವರ ನಿಧನಕ್ಕೆ ಇದೇ ಸಂದರ್ಭದಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ಚಿಕ್ಕವಯಸ್ಸಿನಲ್ಲೇ ಅವರಿಗೆ ಈ ರೀತಿಯ ಸಾವು ಬರಬಾರದಿತ್ತು. ಕರ್ನಾಟಕದ ಬಗ್ಗೆ ಜೇಟ್ಲಿ ಅಪಾರಪ್ರೀತಿ ಹೊಂದಿದ್ದರು. ಹಲವಾರು ವಿಷಯಗಳ ಬಗ್ಗೆ ನಾನು ಅವರೊಂದಿಗೆ ಚರ್ಚೆ ನಡೆಸಿದ್ದೆ ಎಂದು ಹೇಳಿದರು.

Facebook Comments

Sri Raghav

Admin