ತಡರಾತ್ರಿ ಕೆ.ಆರ್.ಪುರಂ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಕಷ್ಟ ಕೇಳಿದ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 2- ರೈತರು ಬೆಳೆದ ತರಕಾರಿ, ಹೂ-ಹಣ್ಣುಗಳನ್ನು ಸರ್ಕಾರವೇ ಖರೀದಿಸಲಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಕೇವಲ ಕಾಗದ ಪತ್ರಗಳ ಮೇಲಿದೆ. ಆದರೆ, ರೈತರು ತಾವೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತಂದರೆ ಅವಕಾಶ ನೀಡದೆ ಪೊಲೀಸರು ಕಿರುಕುಳ ಕೊಟ್ಟು ಓಡಿಸುತ್ತಿದ್ದಾರೆ, ದಲ್ಲಾಳಿಗಳು ಶೋಷಣೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ತಡರಾತ್ರಿ ಕೆಆರ್ ಪುರಂ ಮಾರುಕಟ್ಟೆಗೆ ಭೇಟಿ ನೀಡಿ ತರಕಾರಿ ಮಾರಾಟ ಮಾಡಲು ಅವಕಾಶವಿಲ್ಲದೆ ಕಂಗಾಲಾಗಿದ್ದ ನೂರಾರು ರೈತರ ಜತೆ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು.

ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತಿತರ ಕಡೆಯ ರೈತರು ತಾವು ಬೆಳೆದ ತರಕಾರಿ, ಹಣ್ಣು, ಹೂವು ಉತ್ಪನ್ನಗಳನ್ನು ತಂದು ಹಲವಾರು ವರ್ಷಗಳಿಂದ ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಆದರೆ, ಲಾಕ್‍ಡೌನ್ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ. ಪೊಲೀಸರು ರೈತರ ವಾಹನಗಳನ್ನು ತಡೆದು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಸ್ಥಳದಿಂದಲೇ ಸಹಕಾರ ಮತ್ತು ತೋಟಗಾರಿಕೆ ಸಚಿವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರಿಬ್ಬರು ಫೋನ್ ಕರೆ ಸ್ವೀಕರಿಸಲಿಲ್ಲ ಎಂದು ಡಿಕೆಶಿ ಕಿಡಿಕಿಡಿಯಾದರು.

ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ದಾವಿಸುವಂತೆ ಮನವಿ ಮಾಡಿಕೊಂಡರು.ಸರ್ಕಾರದ ಯಾವ ಅಧಿಕಾರಿಯೂ ರೈತರ ಬಳಿ ಹೋಗಿಲ್ಲ. ಎಷ್ಟು ನಷ್ಟವಾಗಿದೆ ಎಂದು ಸಮೀಕ್ಷೆ ಮಾಡಿಲ್ಲ, ರೈತ ಉತ್ಪನ್ನಗಳನ್ನು ಖರೀದಿ ಮಾಡಿಲ್ಲ ಎಂದು ಆರೋಪಿಸಿದರು.

ಕೂಡಲೇ ರೈತರು ಬೆಳೆದಿರುವ ಬೆಳೆಯನ್ನು ಖರೀದಿಸಬೇಕು. ಮಾರಾಟಕ್ಕೆ ಬರುವ ರೈತರಿಗೆ ಕಿರುಕುಳ ನೀಡದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಡಿಕೆಶಿ ಆಗ್ರಹಿಸಿದರು.

Facebook Comments

Sri Raghav

Admin