‘ಬಿಗ್ ಬಿ’ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬಯಿ: ಭಾರತೀಯ ಸಿನೇಮಾರಂಗದ ಸೂಪರ್ ಸ್ಟಾರ್, ಬಾಲಿವುಡ್ ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಅವರನ್ನು ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಟ್ವಿಟ್ಟರ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಎರಡು ತಲೆಮಾರುಗಳನ್ನು ರಂಜಿಸಿದ ಮತ್ತು ಸ್ಫೂರ್ತಿ ತುಂಬಿದ ಅಮಿತಾಬ್ ಬಚ್ಚನ್ ಅವರನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಇಡೀ ದೇಶ ಮತ್ತು ವಿದೇಶದ ಜನರಿಗಿದು ಖುಷಿ ತಂದಿದೆ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಕಾಲ ಭಾರತೀಯ ಚಿತ್ರರಂಗಕ್ಕೆ ಅಮಿತಾಭ್ ಬಚ್ಚನ್ ನೀಡಿರುವ ಕೊಡುಗೆಯನ್ನ ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ. ಬಿಗ್-ಬಿ ಅವರಿಗೆ ಈಗಾಗಲೇ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದೆ. ಈಗ ದಾದಾ ಸಾಹೇಬ್ ಪಾಲ್ಕೆ ಕೂಡ ಅವರ ಮುಡಿಗೇರಿದೆ.

1961ರಲ್ಲಿ ‘ಸಾಥ್ ಹಿಂದೂಸ್ತಾನಿ’ ಚಿತ್ರದಲ್ಲಿ ನಟಿಸುವ ಮೂಲಕ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶ ಮಾಡಿದರು. ಅಲ್ಲಿಂದ ಆರಂಭವಾದ ಸಿನಿಜರ್ನಿ ನಾಲ್ಕು ದಶಕಗಳ ಕಾಲ ಮುಂದುವರಿದಿದೆ. ಹತ್ತಾರು ಪಾತ್ರಗಳು, ಹತ್ತಾರು ಕಥೆಗಳು, ಹತ್ತಾರು ಗೆಟಪ್ ಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ.

76ನೇ ವಯಸ್ಸಿನಲ್ಲಿ ವಿಭಿನ್ನ ಪಾತ್ರಗಳನ್ನ ಮಾಡುತ್ತಾ ಈಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಹಿಂದಿ ಚಿತ್ರರಂಗದ ದಂತಕಥೆಯಾಗಿರುವ ಬಿಗ್ ಬಿ ಅವರಿಗೆ ಇದುವೆರಗೂ ನಾಲ್ಕು ರಾಷ್ಟ್ರ ಪ್ರಶಸ್ತಿ (ಅಗ್ನಿಪತ್, ಪೀಕು, ಪಾ, ಬ್ಲಾಕ್ ಚಿತ್ರಗಳಿಗೆ) ಲಭಿಸಿದೆ.

ಸಿನಿಮಾ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹಾ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರ 1969ರಿಂದ ಪ್ರಶಸ್ತಿ ನೀಡುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ ರೂ10 ಲಕ್ಷ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ನಟಿ ದೇವಿಕಾ ರಾಣಿ ಅವರಿಗೆ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊದಲ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1995ರಲ್ಲಿ ವರನಟ ಡಾ.ರಾಜಕುಮಾರ್‌ ಅವರಿಗೆ ಫಾಲ್ಕೆ ಪ್ರಶಸ್ತಿ ಪ್ರದಾನಿಸಲಾಯಿತು.

Facebook Comments

Sri Raghav

Admin