ದಕ್ಷಿಣ ಕನ್ನಡದಲ್ಲಿ ನಳೀನ್ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು
ಮಂಗಳೂರು, ಮೇ 23-ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳೀನ್ಕುಮಾರ್ ಕಟೀಲು ಸತತವಾಗಿ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಮಿಥುನ್ರೈ ಸರಿಸುಮಾರು 1.70ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.2009ರಿಂದಲೂ ನಳೀನ್ಕುಮಾರ್ ಕಟೀಲ್ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ.
ಈ ಮೊದಲು ಸಂಸದರಾಗಿದ್ದ ಕಾಂಗ್ರೆಸ್ನ ಹಿರಿಯ ನಾಯಕ ಜನಾರ್ಧನಪೂಜಾರಿ ಅವರನ್ನು ನಳೀನ್ಕುಮಾರ್ ಕಟೀಲ್ ಸೋಲಿಸಿದ್ದರು. ಈ ಬಾರಿ ಕಾಂಗ್ರೆಸ್ ಜನಾರ್ಧನ್ ಪೂಜಾರಿ ಬದಲಾಗಿ ಯುವ ಕಾಂಗ್ರೆಸ್ನ ಮುಖಂಡರಾಗಿದ್ದ ಮಿಥುನ್ರೈ ಅವರಿಗೆ ಟಿಕೆಟ್ ನೀಡಿತ್ತು. ಒಟ್ಟು 13,43000 ಮತದಾನವಾಗಿದ್ದು, ಅದರಲ್ಲಿ ನಳೀನ್ಕುಮಾರ್ ಕಟೀಲ್ ಶೇ.60ಕ್ಕಿಂತಲೂ ಹೆಚ್ಚಿನ ಮತ ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ.
ಈ ಮೂಲಕ ಕರಾವಳಿ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡದಲ್ಲಿ ನಳೀನ್ಕುಮಾರ್ ಕಟೀಲು, ಉತ್ತರ ಕನ್ನಡದಲ್ಲಿ ಕೇಂದ್ರ ಸಚಿವ ಅನಂತ್ಕುಮಾರ್ಹೆಗಡೆ, ಉಡುಪಿ-ಚಿಕ್ಕಮಗಳೂರಿನಲ್ಲಿ ಶೋಭಾಕರಂದ್ಲಾಜೆ ಜಯ ಸಾಧಿಸಿದ್ದು, ಕಾಂಗ್ರೆಸ್-ಜೆಡಿಎಸ್ನ ಭಾರೀ ಕಸರತ್ತಿನ ಹೊರತಾಗಿಯೂ ಕರಾವಳಿಯಲ್ಲಿ ಮತ್ತೆ ಕೇಸರಿ ಬಾವುಟ ರಾರಾಜಿಸಿದೆ.
ಈ ಮೂರು ಲೋಕಸಭಾ ಕ್ಷೇತ್ರಗಳ ಫಲಿತಾಂಶ ಮತ ಎಣಿಕೆ ಆರಂಭಗೊಂಡ ಮೂರ್ನಾಲ್ಕು ಗಂಟೆಗಳಲ್ಲೇ ಪ್ರಕಟಗೊಂಡಿದ್ದು ವಿಶೇಷವಾಗಿತ್ತು.