ಪ್ರಥಮ ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಕೋಲಾರದಲ್ಲಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ,ಆ.17- ಜಿಟಿ-ಜಿಟಿ ಮಳೆಯ ನಡುವೆಯೇ ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆತಿದ್ದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಸಾಹಿತಿಗಳ ಮಹಾಪೂರವೇ ಹರಿದು ಬಂದಿದೆ.

ಇಂದು ಬೆಳಗ್ಗೆ ಉಪ ವಿಭಾಗಾಧಿಕಾರಿ ಸೋಮಶೇಖರ್ ರಾಷ್ಟ್ರ ಧ್ವಜವನ್ನು , ಕಸಾಪ ರಾಜ್ಯಾಧ್ಯಕ್ಷ ಮನುಬಳಿಗಾರ್ ಪರಿಷತ್ ಧ್ವಜವನ್ನು, ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ನಾಡಧ್ವಜಾ ರೋಹಣ ನೆರವೇರಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಮಳೆಯ ಅಭಾವದಿಂದಾಗಿ ನೀರಿಗೆ ಹಾಹಾಕಾರ ವಿದ್ದರೂ ಸಾಹಿತ್ಯಕ್ಕೆ ಬರವಿಲ್ಲವೆಂಬಂತೆ ಸಮ್ಮೇಳನದಲ್ಲಿ ಸಾಹಿತಿಗಳೂ ಹಾಗೂ ಸಾಹಿತ್ಯಾಸಕ್ತರು ಸಂತಸದಿಂದ ಪಾಲ್ಗೊಂಡಿರುವುದು ವಿಶೇಷ.

ಸಮ್ಮೇಳನಕ್ಕೆ ಬಂದಿರುವ ಅತಿಥಿಗಳಿಗೆ ಹಾಗೂ ಸಾಹಿತಾಸಕ್ತರಿಗೆ ದಾಸೋಹದ ಅತಿಥ್ಯ ವಿಜೃಂಭಿಸಿತು. ಹೋಳಿಗೆ ಊಟ: ಸಮ್ಮೇಳನ ನಡೆಯುತ್ತಿರುವ ಚನ್ನಯ್ಯ ರಂಗಮಂದಿರದ ಮುಂಭಾಗದ ಹಾಲಿಸ್ಟರ್ ಚರ್ಚ್ ಸಭಾಂಗಣದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸುಮಾರು 60ಮಂದಿ ಬಾಣಸಿಗರು ಆಹಾರ ಸಿದ್ದಪಡಿಸಿದರು.

ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿಬಾತ್ ಹಾಗೂ ವಿವಿಧ ದೋಸೆ, ಚಟ್ನಿ, ಪಲ್ಯ ನೀಡಲಾಯಿತು. ಮಧ್ಯಾಹ್ನ ಭರ್ಜರಿ ಹೋಳಿಗೆ ಊಟ ಉಣಬಡಿಸಲಾಯಿತು. ಊಟ-ತಿಂಡಿಗೆ ಬಹಳ ಮೆಚ್ಚುಗೆ ವ್ಯಕ್ತವಾಯಿತು.

ಸಮ್ಮೇಳನಾಧ್ಯಕ್ಷರಾದ ಸಾಹಿತಿ ಹಾಗೂ ಚಿಂತಕ ಡಾ. ಎಲ್.ಹನುಮಂತಯ್ಯ ಅವರನ್ನು, ರಾಜ್ಯಾಧ್ಯಕ್ಷ ಮನುಬಳಿಗಾರ್, ಜಿಲ್ಲಾಧ್ಯಕ್ಷ ನಾಗಾನಂದಕೆಂಪರಾಜ್ ಹಾಗೂ ಹಿರಿಯ ಸಾಹಿತಿಗಳು ಆದರರಿಂದ ಬರಮಾಡಿಕೊಂಡರು.

ಆ ನಂತರ ಸಮ್ಮೇಳನಾಧ್ಯಕ್ಷರು ಅಂಬೇಡ್ಕರ್, ಮಹಾತ್ಮಗಾಂಧಿ ಮತ್ತು ಸರ್ವಜ್ಞರ ಪ್ರತಿಮೆ ಮಾಲಾರ್ಪಣೆ ಮಾಡಿ ಯಾವುದೇ ಅದ್ಧೂರಿ ಮೆರವಣಿಗೆ ಇಲ್ಲದೆ ವೇದಿಕೆಗೆ ಆಗಮಿಸಿದರು.

ಮಾಲಾರ್ಪಣೆ ವೇಳೆ ಸುದ್ದಿಗಾರ ರೊಂದಿಗೆ ಡಾ.ಎಲ್.ಹನುಮಂತಯ್ಯ ಅವರು ಮಾತನಾಡಿ ದಲಿತರ ತವರೂರಾದ ಕೋಲಾರದಲ್ಲಿ ಕಸಾಪ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.

ದಲಿತ ಸಮುದಾಯದ ನೋವು-ನಲಿವುಗಳನ್ನು ಗೋಷ್ಠಿಗಳ ಮೂಲಕ ಮುಖ್ಯವಾಹಿನಿಯಲ್ಲಿ ಹಂಚಿಕೊಳ್ಳುವಂತಾಗಿದೆ ಎಂದರು.1979ರಲ್ಲಿ ದಲಿತ ಗೋಷ್ಠಿ ನಡೆಸಲು ಕಸಾಪ ನಿರಾಸಕ್ತಿ ತಾಳಿತ್ತು.

ಆದರೆ ಇದೇ ಕಸಾಪ ಇಂದು ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಿರುವುದು ಸಂತಸ ತಂದಿದೆ. ಈ ಮೂಲಕ ತಾರತಮ್ಯ ಹೋಗಲಾಡಿಸಲಾಗಿದೆ ಎಂದು ಎಲ್.ಹನುಮಂತಯ್ಯ ಹೇಳಿದರು.

Facebook Comments

Sri Raghav

Admin