‘ದಲಿತಸ್ತಾನ್ ನಿರ್ಮಾಣದ ಕನಸು ಹೊಂದಿದ್ದ ಅಂಬೇಡ್ಕರ್’: ಗೋವಾ ಡಿಸಿಎಂ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, ಫೆ.4- ದಲಿತರಿಗೆ ದಲಿತಾಸ್ತಾನ್ ರಾಷ್ಟ್ರ ನಿರ್ಮಿಸುವ ಗುರಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೊಂದಿದ್ದರು. ಆದರೆ ಭಾರತೀಯರು ಅದಕ್ಕೆ ಅವಕಾಶ ನೀಡದೆ ಒಗ್ಗಟ್ಟಾಗಿದ್ದರು ಎಂದು ಗೋವಾ ಉಪ ಮುಖ್ಯಮಂತ್ರಿ ಮನೋಹರ್ ಅಗಾಂಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಕಾಯ್ದೆ ಜಾರಿಗೆ ತಂದಿರುವುದನ್ನು ಗೋವಾ ವಿಧಾನಸಭೆಯಲ್ಲಿ ಸ್ವಾಗತಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮುಸಲ್ಮಾನರು ಇಬ್ಭಾಗವಾಗಿ ತಮ್ಮದೇ ಆದ ಮುಸ್ಲಿಂ ರಾಷ್ಟ್ರವನ್ನು ಸೃಷ್ಟಿಸಿಕೊಂಡರು. ಆದರೆ ಭಾರತೀಯರು ಹಿಂದೂ ರಾಷ್ಟ್ರ ನಿರ್ಮಾಣ ಮಾಡದೆ ಒಗ್ಗಟ್ಟಾಗಿ ಭಾರತೀಯರಾಗಿ ಮುಂದುವರೆದಿದ್ದಾರೆ ಎಂದರು. ಕೆಲವರು ಹಿಂದೂ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರಿಗಾಗಿ ದಲಿತಾಸ್ತಾನ್ ರಾಷ್ಟ್ರ ನಿರ್ಮಾಣದ ಅಗತ್ಯದ ಬಗ್ಗೆ ಮಾತನಾಡಿದ್ದರು. ಆದರೆ ಇದ್ಯಾವುದಕ್ಕೂ ಅವಕಾಶ ನೀಡದೆ ರಾಷ್ಟ್ರದಲ್ಲಿರುವ ಎಲ್ಲಾ ಧರ್ಮೀಯರೂ ಒಗ್ಗಟ್ಟಾಗಿ ಜೀವನ ನಡೆಸುತ್ತಿದ್ದಾರೆ ಎಂದರು.

ದೇಶಕ್ಕೆ ಸ್ವಾತಂತ್ರ್ಯಬಂದ ನಂತರ ಅಂಬೇಡ್ಕರ್ ಅವರು ಭಾರತದಲ್ಲಿರುವ ಎಲ್ಲಾ ಧರ್ಮೀಯರಿಗೂ ಅನ್ವಯವಾಗುವಂತಹ ಸಂವಿಧಾನ ರಚಿಸಿ ಮಹಾತ್ಮರಾದರು ಎಂಬುದನ್ನು ಉಲ್ಲೇಖಿಸಿದರು. ಇಂದು ಭಾರತ ಅತ್ಯುನ್ನತ ರಾಷ್ಟ್ರವಾಗಿ ಗುರುತಿಸಿಕೊಂಡಿರುವುದರ ಹಿಂದೆ ಪ್ರತಿಯೊಬ್ಬರ ಕೊಡುಗೆ ಇದೆ ಎಂದು ಹೇಳಿದರು.

ಅನ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಜೈನ, ಬೌದ್ಧ , ಹಿಂದೂ ಮತ್ತಿತರ ಧರ್ಮೀಯರಿಗೆ ಭಾರತದ ಪೌರತ್ವ ನೀಡುವ ಸಿಎಎ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಗೋವಾ ವಿಧಾನಸಭೆಯಲ್ಲಿ ಅಭಿನಂದಿಸಲಾಯಿತು.

Facebook Comments