ನಾಳೆಯಿಂದ ‘ದಮಯಂತಿ’ ಆರ್ಭಟ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ರಾಧಿಕಾ ದಮಯಂತಿ ಯಾಗಿ ಬರುತ್ತಿದ್ದಾರೆ. ಬಹಳ ವರ್ಷಗಳ ನಂತರ ಒಂದು ಚಾಲೆಂಜಿಂಗ್ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಮತ್ತೊಮ್ಮೆ ಗೆಲ್ಲಲು ಸಿದ್ಧವಾಗಿದ್ದು, ನೋಡುಗರ ಹೃದಯ ಝಲ್ಲೆನ್ನಿಸುವಂತೆ ಮಾಡಲಿದ್ದಾರೆ ಎಂಬ ಮಾತುಗಳು ಚಿತ್ರತಂಡದಿಂದ ಕೇಳಿಬರುತ್ತಿವೆ.

ಅನ್ಯಾಯ ಆಗ್ತಿದ್ರೂ ಅನುಸರಿಸಿಕೊಂಡು ಹೋಗೋಕೆ ನಳಚರಿತ್ರೆಯಲ್ಲಿ ಬರುವ ನಳ ದಮಯಂತಿ ಅಲ್ಲ ನಾನು. ಎದುರಾಳಿಗಳ ಎದೆ ಸೀಳಿ, ಮೃತ್ಯುವಿನ ಜೊತೆ ರುದ್ರತಾಂಡವ ಆಡುವ ದಮ ದಮ ದಮಯಂತಿ ಕಣೋ ನಾನು. ಅಂತಹ ನನಗೇ ದಿಗ್ಬಂಧನ ಹಾಕುವಷ್ಟು ದಿಮಾಕೇನ್ರೋ ನಿಮಗೆ..? ಎಂಬ ಡೈಲಾಗ್ ಬಹಳಷ್ಟು ವೈರಲ್ ಆಗಿದ್ದು, ಸಿನಿ ಪ್ರಿಯರಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ರಾಜ್ಯಾದ್ಯಂತ ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿರುವ ಈ ಚಿತ್ರವನ್ನು ನವರಸನ್ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಐದು ಭಾಷೆಗಳಲ್ಲಿ ಸಿದ್ಧವಾಗಿದೆ. ಈ ಚಿತ್ರವು ಹಾರರ್, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿದ್ದು, ಪ್ರೇಕ್ಷಕರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಪರದೆ ಮೇಲೆ ಬರುತ್ತಿದ್ದು, ಈ ಚಿತ್ರಕ್ಕೆ ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ.

ಇನ್ನು ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣವಿರುವ ಈ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಒಂದು ಹಾಡು ಭಾರೀ ವೈರಲ್ ಆಗಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ನಿರ್ದೇಶಕ ನವರಸನ್ ಪ್ರಕಾರ, ಈ ಚಿತ್ರ ಬಹಳ ಅದ್ಧೂರಿ ಹಾಗೂ ವಿಭಿನ್ನವಾಗಿ ಮೂಡಿಬಂದಿದ್ದು, ಗ್ರಾಫಿಕ್ ಕೂಡ ಪ್ರೇಕ್ಷಕರನ್ನು ಸೆಳೆಯಲಿದೆ.

ಈ ಹಿಂದೆ ಪರಭಾಷೆಗಳಲ್ಲಿ ಬಂದಂತಹ ಭಾಗಮತಿ ಹಾಗೂ ಅರುಂಧತಿ ಚಿತ್ರಗಳಿಗಿಂತ ವಿಭಿನ್ನವಾಗಿ ಬೆಳ್ಳಿ ಪರದೆ ಮೇಲೆ ನಮ್ಮ ಚಿತ್ರ ಕಾಣಲಿದೆ. ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ಈ ಚಿತ್ರವನ್ನು ಸಿದ್ಧಪಡಿಸಿದ್ದೇವೆ. ಅದೇ ರೀತಿ ನಟಿ ರಾಧಿಕಾ ಕೂಡ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಸಂಭಾಷಣೆಯೂ ರೋಮಾಂಚನವಾಗಿದೆ. ಉಳಿದಂತೆ ಭಜರಂಗಿ ಲೋಕಿಯ ಎಂಟ್ರಿ ಕೂಡ ಚಿತ್ರದ ಹೈಲೆಟ್‍ಗಳಲ್ಲಿ ಒಂದಾಗಿದ್ದು, ನಗಿಸಲು ಸಾಧಕೋಕಿಲ, ತಬಲ ನಾಣಿ, ಮಿತ್ರ, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ ಕಾಣಿಸಲಿದ್ದಾರೆ.

ಹಾಗೆಯೇ ರವಿಗೌಡ, ನವೀನ್‍ಕೃಷ್ಣ, ಬಲರಾಜ್ ವಾಡಿ, ವೀಣಾ ಸುಂದರ್ ಸೇರಿದಂತೆ ಬಹಳಷ್ಟು ಅನುಭವಿ ಕಲಾವಿದರು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಎಲ್ಲೂ ಬೋರ್ ಆಗದೆ ಎರಡು ಗಂಟೆಗಳ ಕಾಲ ನಿಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ ಎಂದು ತಿಳಿಸಿದ್ದಾರೆ.  ನಿರೀಕ್ಷೆಯಂತೆ ಬಿಡುಗಡೆಗೊಳ್ಳುತ್ತಿರುವ ದಮಯಂತಿ ಬೆಳ್ಳಿ ಪರದೆ ಮೇಲೆ ತನ್ನ ಅಬ್ಬರ ತೋರಿಸಲು ಸಿದ್ಧಳಾಗಿದ್ದಾಳೆ.

Facebook Comments