ಮುಂಗಾರು ಪ್ರಾರಂಭವಾಗಿ 2 ತಿಂಗಳು ಕಳೆದರೂ ಅರ್ಧದಷ್ಟು ಭರ್ತಿಯಾಗಿಲ್ಲ ಜಲಾಶಯಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.5-ಪ್ರಸಕ್ತ ಮುಂಗಾರಿನಲ್ಲಿ ರಾಜ್ಯದ ಪ್ರಮುಖ ಜಲಾಶಯಗಳು ಇನ್ನೂ ಅರ್ಧದಷ್ಟು ಭರ್ತಿಯಾಗಿಲ್ಲ. ಮುಂಗಾರು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಜಲಾಶಗಳಿಗೆ ಬಂದಿಲ್ಲ.

ಕೃಷ್ಣಾ ಕೊಳ್ಳದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಹಂತಕ್ಕೆ ತಲುಪಿವೆ. ಉಳಿದ ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದ್ದು, ಈ ವಾರ ಒಳ ಹರಿವು ಹೆಚ್ಚಾಗಿ ಜಲಾಶಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆಗಳಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ ಪ್ರಮುಖ ಪ್ರಮುಖ ಜಲಾಶಯಗಳ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 860.27 ಟಿಎಂಸಿ ಅಡಿಯಾಗಿದೆ. ಆದರೆ ಇದುವರೆಗೂ ಅರ್ಧದಷ್ಟು ನೀರು ಕೂಡ ಜಲಾಶಯಗಳಲ್ಲಿ ಸಂಗ್ರಹವಾಗಿಲ್ಲ.

ಕೃಷ್ಣಾ, ಕಾವೇರಿ ಕೊಳದ ಜಲಾಶಯಗಳು, ಜಲವಿದ್ಯುತ್ ಉತ್ಪಾದಿಸುವ ಜಲಾಶಯಗಳಲ್ಲಿ ಒಟ್ಟು 415.69 ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳಲ್ಲಿ 457.16 ಟಿಎಂಸಿ ಅಡಿಗಳ ನೀರಿತ್ತು.

ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದರಿಂದ ಕಳೆದ ವರ್ಷಕ್ಕಿಂತ 35 ಟಿಎಂಸಿ ಅಡಿಯಷ್ಟು ನೀರು ಕಡಿಮೆ ಸಂಗ್ರಹವಾಗಿದೆ. ರಾಜ್ಯದಲ್ಲಿ ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ವರಾಹಿ ಜಲಾಶಯಗಳ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 328.18 ಟಿಎಂಸಿ ಅಡಿಗಳು.

ಈ ವರ್ಷ 101.26 ಟಿಎಂಸಿ ಅಡಿಗಳಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 155.75ಟಿಎಂಸಿ ಅಡಿಗಳಷ್ಟಿತ್ತು. ಕಳೆದ ವರ್ಷಕ್ಕಿಂತ 54 ಟಿಎಂಸಿ ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ.

ಕಾವೇರಿ ಕೊಳ್ಳದ ಜಲಾಶಯಗಳಾದ ಹಾರಂಗಿ, ಕೆಆರ್ ಎಸ್, ಹೇಮಾವತಿ ಹಾಗೂ ಕಬಿನಿ ಜಲಾಶಯಗಳ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 114.57 ಟಿಎಂಸಿ ಅಡಿಗಳು. ಆದರೆ, ಈ ವರ್ಷ ಇದುವರೆಗೆ 70.87 ಟಿಎಂಸಿ ಅಡಿಗಳಷ್ಟು ಮಾತ್ರ ಸಂಗ್ರಹವಾಗಿದೆ.

ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿಲ್ಲ. ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ ಜಲಾಶಯಗಳಿಗೂ ಸಾಕಷ್ಟು ನೀರು ಬರಲಿದೆ.

ಕೃಷ್ಣಾ ಕೊಳ್ಳದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ಉಳಿದ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಜಲಾಶಯಗಳಿಗೂ ಇನ್ನೂ ಸಾಕಷ್ಟು ಪ್ರಮಾಣದ ನೀರು ಬರಬೇಕಿದೆ.

ಈ ಎಲ್ಲಾ ಜಲಾಶಯಗಳ ಗರಿಷ್ಠ ಸಾಮರ್ಥ್ಯ 417.52 ಟಿಎಂಸಿ ಅಡಿಗಳು. ಇದುವರೆಗೂ 243.57 ಟಿಎಂಸಿ ಅಡಿಗಳಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 255.90 ಟಿಎಂಸಿ ಅಡಿಗಳಷ್ಟು ನೀರಿತ್ತು.

ಮುಂಗಾರು ಆರಂಭ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ಮಳೆಯಾಗುತ್ತಿದೆ. ಆದರೆ, ಜಲಾಶಯ ಮತ್ತು ಕೆರೆಗಳು ಭರ್ತಿಯಾಗುವಂತಹ ಮಳೆಯಾಗಿಲ್ಲ.

Facebook Comments

Sri Raghav

Admin