ಬೆಂಗಳೂರಿನ ಜೆಪಿ ನಗರದಲ್ಲಿ ಡಬಲ್ ಮರ್ಡರ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ಸಿಲಿಕಾನ್ ಸಿಟಿಯಲ್ಲಿ ಜೋಡಿ ಕೊಲೆಯಾಗಿದೆ. ಒಂದೇ ಮನೆಯಲ್ಲಿದ್ದ ಪಶ್ಚಿಮ ಬಂಗಾಳ ಮೂಲದ 71 ವರ್ಷದ ವೃದ್ಧೆ ಮಮತಾ ಬಸು ಹಾಗೂ ಒಡಿಸಾ ಮೂಲದ ಉಪನ್ಯಾಸಕ ದೇವರಥ್ ಬೆಹೇರಾ (41) ಕೊಲೆಯಾದ ದುರ್ದೈವಿಗಳು. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ.ನಗರ 7ನೆ ಹಂತ, ಬ್ರಿಗೇಡ್ ಮಿಲೇನಿಯಂ ಅಪಾರ್ಟ್‍ಮೆಂಟ್ ಸಮೀಪದ ಸಂತೃಪ್ತಿ ನಗರದಲ್ಲಿರುವ ಮನೆಯೊಂದರಲ್ಲಿ ಈ ಜೋಡಿ ಕೊಲೆಯಾಗಿದೆ. ಕೊಲೆಯಾಗಿರುವ ಮಮತಾ ಬಸು ಅವರ ಮಗಳು ವಿದೇಶದಲ್ಲಿದ್ದಾರೆ. ಮಗ ದೇವದೀಪ ಬಸು ಅವರು ಇದೇ ಪ್ರದೇಶದ ಸಂತೃಪ್ತಿ ನಗರದಲ್ಲಿ ವಾಸವಾಗಿದ್ದು, ಉಪನ್ಯಾಸಕರಾಗಿದ್ದಾರೆ.

ಮನೆಯಲ್ಲಿ ಮಮತಾ ಬಸು ಏಕಾಂಗಿಯಾಗಿ ವಾಸಿಸುತ್ತಿದ್ದರು. 25 ದಿನಗಳ ಹಿಂದೆ ವೃದ್ಧೆಯ ಮಗನ ಸ್ನೇಹಿತ ಒಡಿಸಾ ಮೂಲದ ದೇವರಥ್ ಬೆಹೇರಾ ಅವರು ನಗರಕ್ಕೆ ಬಂದಿದ್ದು, ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಅವರು ವೃದ್ಧೆಯ ಮನೆಯಲ್ಲೇ ತಂಗಿದ್ದರು.

ನಿನ್ನೆ ರಾತ್ರಿ ಮನೆಗೆ ನುಗ್ಗಿದ ಹಂತಕರು ಮೊದಲ ಮಹಡಿಯಲ್ಲಿ ಮಲಗಿದ್ದ ವೃದ್ಧೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಕೆಳ ಮಹಡಿಯಲ್ಲಿ ನಿದ್ರಿಸುತ್ತಿದ್ದ ದೇವರಥ್ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಜೋಡಿ ಕೊಲೆ ಮಾಡಿರುವ ಹಂತಕರು ಮನೆಯನ್ನೆಲ್ಲಾ ಜಾಲಾಡಿದ್ದು , ಲ್ಯಾಪ್‍ಟಾಪ್, ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‍ಪಾಂಡೆ ತಿಳಿಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯ ಸುಮಾರಿನಲ್ಲಿ ಮನೆ ಕೆಲಸದಾಕೆ ಮನೆ ಬಳಿ ಬಂದಿದ್ದಾರೆ.

ಬಾಗಿಲು ತೆರೆದಿರುವುದನ್ನು ಗಮನಿಸಿ ಅಮ್ಮಾ ಎಂದು ಕೂಗಿದಾಗ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಒಳಗೆ ಹೋಗಿ ನೋಡಿದಾಗ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಗಾಬರಿಯಾಗಿ ಹೊರಗೆ ಬಂದು ಅಕ್ಕ ಪಕ್ಕದವರಿಗೆ ತಿಳಿಸಿ ನಂತರ ವೃದ್ಧೆ ಮಗ ದೇವದೀಪ ಬಸು ಅವರಿಗೆ ವಿಷಯ ತಿಳಿಸಿದ್ದಾರೆ. ದೇವದೀಪ ಬಸು ಅವರು ಮನೆ ಬಳಿ ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ದೇವರಥ್ ಅವರು ಕೇವಲ ಒಂದು ಟವಲ್ ಸುತ್ತಿಕೊಂಡು ಮಲಗಿದ್ದರು. ಹಂತಕರು ಚಾಕುವಿನಿಂದ ಅವರನ್ನು ಇರಿದು ಕೊಲೆ ಮಾಡುವ ಸಂದರ್ಭದಲ್ಲಿ ಮೈ ಮೇಲಿದ್ದ ಟವಲ್ ಕಳಚಿ ಬಿದ್ದ ಹಿನ್ನೆಲೆಯಲ್ಲಿ ಅವರ ಶವ ಬೆತ್ತಲೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿವೆ. ವೃದ್ಧೆ ಒಂಟಿಯಾಗಿರುವುದನ್ನು ಗಮನಿಸಿದ ಹಂತಕರು ಮನೆ ಲೂಟಿ ಮಾಡಲು ಬಂದು ಆಕೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೃದ್ಧೆಯ ಜತೆ ಮತ್ತೊಬ್ಬ ವ್ಯಕ್ತಿ ಇರುವ ಬಗ್ಗೆ ಮಾಹಿತಿ ಇಲ್ಲದಿದ್ದರಿಂದ ಹಂತಕರು ಆತನನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಮನೆಯ ಸುತ್ತಮುತ್ತಲ ರಸ್ತೆಯಲ್ಲಿರುವ ಸಿಸಿ ಟಿವಿಗಳ ಫುಟೇಜ್‍ಗಳನ್ನು ಪಡೆದುಕೊಂಡಿರುವ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತಿತರ ಹಿರಿಯ ಪೊಲೀಸ್ ಅಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin