ರಜಿನಿಯ ‘ದರ್ಬಾರ್’ ವಿರುದ್ಧ ಕನ್ನಡ ಸಂಘಟನೆಗಳ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ದರ್ಬಾರ್ ಚಿತ್ರದ ವಿರುದ್ಧ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಇಂದಿನಿಂದ ಪ್ರದರ್ಶನ ಆರಂಭವಾದ ನರ್ತಕಿ ಥಿಯೇಟರ್‍ಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ದರ್ಬಾರ್ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರದರ್ಶಿಸುವಂತೆ ಒತ್ತಾಯಿಸಿದವು.

ಇಂದು ನರ್ತಕಿಯಲ್ಲಿ ತೆಲುಗು ಭಾಷೆಯ ದರ್ಬಾರ್ ಚಿತ್ರ ಬಿಡುಗಡೆಗೊಂಡಿದ್ದು ಕನ್ನಡಕ್ಕೆ ಡಬ್ ಆದ ಚಿತ್ರವನ್ನೇ ಕರ್ನಾಟಕದಲ್ಲಿ ಬಿಡುಗಡೆಗೊಳಿಸಿ ಎಂದು ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.  ರಣಧೀರ ಪಡೆಯ ಅಧ್ಯಕ್ಷ ಹರೀಶ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕರರನ್ನು ತಡೆಯಲು ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‍ನಲ್ಲಿ ತುಂಬಿಸಿಕೊಂಡು ಪೊಲೀಸರು ಕರೆದೊಯ್ದರು. ದರ್ಬಾರ್ ಚಿತ್ರ ಬಿಡುಗಡೆಗೂ ಮುನ್ನವೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೆಲ ಸಂಘಟನೆಗಳು ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಗೊಳಿಸುವಂತೆ ಮನವಿ ಮಾಡಿತು.

ಸಮಯ ಅಭಾವ ಮತ್ತಿತರ ಕಾರಣಗಳಿಂದಾಗಿ ಚಿತ್ರನಿರ್ದೇಶಕ ಮುರುಗ ದಾಸನ್ ಕನ್ನಡಕ್ಕೆ ಡಬ್ ಮಾಡದೆ ತೆಲುಗು ಅವತರಣಿಕೆಯ ಚಿತ್ರವನ್ನು ಇಂದು ಬಿಡುಗಡೆ ಮಾಡಿದ್ದಾರೆ.
ಇದನ್ನು ಅರಿತ ಸಂಘಟನೆಗಳ ಮುಖಂಡರು ಇಂದಿನ ಮೊದಲ ಪ್ರದರ್ಶನವನ್ನೇ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದರು.

Facebook Comments