ದರ್ಶನ್ ಕಾರ್ ಆಕ್ಸಿಡೆಂಟ್ ಆಗಿದ್ದೇಗೆ..? ಈಗ ಹೇಗಿದ್ದಾರೆ ಚಾಲೆಂಜಿಂಗ್ ಸ್ಟಾರ್..?

ಈ ಸುದ್ದಿಯನ್ನು ಶೇರ್ ಮಾಡಿ

Darshan-Accident

ಮೈಸೂರು, ಸೆ.24- ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಡರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ನಟ ದರ್ಶನ್ ಅವರು ಪ್ರಯಾಣಿಸುತ್ತಿದ್ದ ಕಾರು ಇಲ್ಲಿ ನ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿದ್ದು, ದರ್ಶನ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ನಟ ದೇವರಾಜ್ ಹಾಗೂ ಅವರ ಪುತ್ರ ಪ್ರಜ್ವಲ್ ದೇವರಾಜ್, ದರ್ಶನ್ ಸ್ನೇಹಿತರಾದ ಆಂಟೋನಿ ಅವರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ದರ್ಶನ್ ಅವರ ಕೈ ಮುರಿದಿದ್ದು, ಅವರ ಕೈಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸ್ವತಃ ದರ್ಶನ್ ಅವರೇ ಕಾರು ಚಲಾಯಿಸುತ್ತಿದ್ದರು. ಬೆಳಗ್ಗಿನ ಜಾವ 3.35ರ ಸುಮಾರಿಗೆ ರಿಂಗ್ ರಸ್ತೆಯ ಜೆಎಸ್‍ಎಸ್ ಅರ್ಬನ್ ಹಾಥ್ ಬಳಿಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದಿದೆ. ಮಗುಚಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಕ್ಷಣ ಕಾರನ್ನು ದರ್ಶನ್ ಸ್ನೇಹಿತರು ಅಲ್ಲಿಂದ ಬೆಂಗಳೂರಿಗೆ ಸಾಗಿಸಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಪಘಾತದಿಂದ ದರ್ಶನ್‍ಗೆ ಹೆಚ್ಚಿನ ಗಾಯಗಳಾಗಿದ್ದು, ದೇವರಾಜ್ ಅವರ ಎದೆಗೆ ಹಾಗೂ ಪ್ರಜ್ವಲ್ ಅವರ ಕತ್ತಿನ ಭಾಗಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದರ್ಶನ್ ಅವರ ಕೈಗೆ ಶಸ್ತ್ರಚಿಕಿತ್ಸೆ ನಡೆಸಿ 25 ಹೊಲಿಗೆ ಹಾಕಲಾಗಿದೆ. 2 ದಿನಗಳ ಕಾಲ ಆಸ್ಪತ್ರೆಯಲ್ಲಿಬೇಕಾಗುತ್ತದೆ.

Odeya--01

ಅದೇ ರೀತಿ ದೇವರಾಜ್ ಅವರ ಎಡಗೈ ಬೆರಳು ಮುರಿದಿದ್ದು, ತಲೆ ಮತ್ತು ಎದೆ ಭಾಗಕ್ಕೂ ಏಟು ಬಿದ್ದಿದೆ. ಆಂಟೋನಿ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಪೇಂದ್ರ ಶೆಣೈ ತಿಳಿಸಿದ್ದಾರೆ.  ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಮಗನೊಂದಿಗೆ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯ ಮುಂಭಾಗ ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಸ್ನೇಹಿತರೊಂದಿಗೆ ನಟ ದರ್ಶನ್ ನಿನ್ನೆ ಮೈಸೂರಿಗೆ ಆಗಮಿಸಿದ್ದರು. ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದರು. ಮಾತ್ರವಲ್ಲ ಅರಮನೆಯಲ್ಲಿ ಮಾವುತರೊಂದಿಗೆ ಪಂಕ್ತಿಭೋಜನದಲ್ಲೂ ಭಾಗಿಯಾಗಿದ್ದರು.  ಸೆಲ್ಫ್ ಅಪಘಾತವಾಗಿರುವುದರಿಂದ ಪೊಲೀಸರಿಗೆ ಯಾವುದೇ ದೂರು ದಾಖಲಿಸುವುದಿಲ್ಲ ಎಂದು ದರ್ಶನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ವಿವಿ ಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಜಗ್ಗೇಶ್ ಟ್ವೀಟ್  : 

Tweet--01

ಸೋಮವಾರ ಬೆಳಗ್ಗೆಯೇ ಎಲ್ಲರೂ ಆತಂಕ ಪಡುವ ಸುದ್ದಿ ಎದುರಾಗಿದೆ. ನಟ ದರ್ಶನ್ ಚಲಿಸುತ್ತಿದ್ದ ಕಾರು ಮೈಸೂರಿನಲ್ಲಿ ಅಪಘಾತವಾಗಿದ್ದು, ಅಭಿಮಾನಿಗಳಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ.  ಈ ಘಟನೆಯ ಬಗ್ಗೆ ಈಗ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ”ಕಲಾ ಬಂಧು ದರ್ಶನ್ ಗೆ ಅಪಘಾತವಾದ ಸುದ್ದಿ ಕೇಳಿ ದಿಘ್ಬ್ರಾಂತನಾದೆ!!. ಕೊಟ್ಯಾಂತರ ಕನ್ನಡದ ಆತ್ಮಗಳು ಹಾಗೂ ಅಮ್ಮನ ಆಶೀರ್ವಾದ ದರ್ಶನ್ ಅನ್ನು ಕಾಪಾಡಿದೆ. ಕ್ಷೇಮವಾಗಿದ್ದಾರೆ ರಾಯರದಯೇ.. ಯಾರ ಕಣ್ಣು ತಾಕದೆ ಸುಖವಾಗಿ ಬಾಳಿ.. ಶುಭಹಾರೈಕೆ.” ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin