ಭರ್ಜರಿ ಎಂಟ್ರಿ ಕೊಟ್ಟ ‘ಒಡೆಯ’

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷೆಯ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರವನ್ನು ಸಂದೇಶ್ ನಾಗರಾಜ್ ಅವರು ನಿರ್ಮಿಸಿದ್ದಾರೆ. ಅದ್ಧೂರಿ ತಾರಾಗಣದೊಂದಿಗೆ ಬಿಡುಗಡೆಗೊಂಡಿರುವ ಈ ಚಿತ್ರ ಸಿನಿ ಪ್ರಿಯರ ಸಂತೋಷ ಇಮ್ಮಡಿಗೊಳಿಸಿದೆಯಂತೆ.

ಇದು ತಮಿಳಿನ ವೀರಂ ಚಿತ್ರದ ರೀಮೇಕ್ ಆಗಿದ್ದರೂ ನಮ್ಮ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಹೆಣೆದಿದ್ದಾರಂತೆ. ಯಜಮಾನ, ಕುರುಕ್ಷೇತ್ರ ಚಿತ್ರಗಳ ನಂತರ ದರ್ಶನ್ ಅಭಿನಯದಲ್ಲಿ ತೆರೆಕಾಣುತ್ತಿರುವ ಈ ಚಿತ್ರ ತನ್ನ ಹಲವಾರು ವಿಶೇಷತೆಗಳಿಂದ ಸುದ್ದಿಯಲ್ಲಿದೆ. ಸಂದೇಶ್ ನಾಗರಾಜ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಒಡೆಯ ಸಿನಿಮಾಗೆ ಅತಿಹೆಚ್ಚು ಲೊಕೇಶನ್‍ಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಎರಡು ಹಾಡುಗಳನ್ನು ವಿದೇಶದಲ್ಲಿ ಶೂಟ್ ಮಾಡಲಾಗಿದೆ.

ಬುಲ್ ಬುಲ್ ಚಿತ್ರದ ನಂತರ ಎಂ.ಡಿ.ಶ್ರೀಧರ್ ಹಾಗೂ ದರ್ಶನ್ ಕಾಂಬಿನೇಷನ್‍ನಲ್ಲಿ ಮೂಡಿಬಂದಿರುವ ಒಡೆಯ ಚಿತ್ರವು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾಗಿದೆ. ಬುಲ್‍ಬುಲ್‍ನಂಥ ಸೂಪರ್ ಹಿಟ್ ಚಿತ್ರವನ್ನು ನೀಡಿದ್ದ ಈ ಜೋಡಿ ಬಹಳ ದಿನಗಳ ನಂತರ ಮತ್ತೆ ಒಂದಾಗಿದೆ. ಒಡೆಯ ಚಿತ್ರವನ್ನು ನೋಡಿದ ದಚ್ಚು ಅಭಿಮಾನಿಗಳು ಬಹಳ ದಿನಗಳ ನಂತರ ದರ್ಶನ್‍ರನ್ನು ಒಂದು ಅದ್ಭುತವಾದ ಪಾತ್ರದ ಮೂಲಕ ತೆರೆಮೇಲೆ ನೋಡಿದಂತಾಯಿತು ಎಂದಿದ್ದಾರೆ.

ಕೂಡು ಕುಟುಂಬವೊಂದರಲ್ಲಿ  ಸಹೋದರರನ್ನು ಮಕ್ಕಳಂತೆ ಕಾಣುವ ಒಡೆಯನ ಕಥೆ ಈ ಚಿತ್ರದಲ್ಲಿದ್ದು, ಅಣ್ಣ-ತಮ್ಮಂದಿರ ನಡುವಿನ ಸಂಬಂಧದ ಎಳೆಯನ್ನಿಟ್ಟುಕೊಂಡು ನಿರ್ದೇಶಕ ಶ್ರೀಧರ್ ಅವರು ಗ್ರಾಮೀಣ ಸೊಗಡಿನ ಕಥೆಯನ್ನು ತೆರೆಯ ಮೇಲೆ ಮೂಡಿಸಿದ್ದಾರೆ. ಈ ಚಿತ್ರದಲ್ಲಿ ನಟ ದರ್ಶನ್ ಒಡೆಯನಾಗಿದ್ದು, ಅವರ ಪಾತ್ರದ ಹೆಸರು ಗಜ. ಒಡತಿಯಾಗಿ ಕೂರ್ಗ ಮೂಲದ ಸನ್ಹ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.

ಮೂಲತಃ ಮಾಡೆಲ್ ಆಗಿದ್ದ ಕೊಡಗು ಮೂಲದ ಸನ್ಹ ತಿಮ್ಮಯ್ಯ ಒಡೆಯನ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ದಚ್ಚು ಸೋದರರಾಗಿ ಯಶಸ್ ಸೂರ್ಯ, ಪಂಕಜ್, ನಿರಂಜನ್ ಮತ್ತು ಸಮರ್ಥ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟ ದರ್ಶನ್ ಅವರದ್ದು ಎರಡು ಶೇಡ್ ಇರುವ ಪಾತ್ರ. ಪ್ರಥಮಾರ್ಧದಲ್ಲಿ ಹಳ್ಳಿ ಗೆಟಪ್‍ನಲ್ಲಿ ಕಾಣಿಸಿಕೊಂಡರೆ, ದ್ವಿತೀಯಾರ್ಧದಲ್ಲಿ ಸಿಟಿ ಹುಡುಗನ ಗೆಟಪ್‍ನಲ್ಲಿ ಬರಲಿದ್ದಾರೆ.

ಮೈಸೂರು, ಬೆಂಗಳೂರು ಹಾಗೂ  ಹೈದರಾಬಾದ್‍ನಲ್ಲಿ ಹಾಗೂ ಫಾರಿನ್‍ನಲ್ಲಿ ಹಾಡುಗಳ ಚಿತ್ರೀಕರಣ ಸೇರಿದಂತೆ ನೂರಕ್ಕೂ ಹೆಚ್ಚು ದಿನಗಳ ಕಾಲ ಒಡೆಯನಿಗೆ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರಕ್ಕೆ ಎ.ವಿ. ಕೃಷ್ಣಕುಮಾರ್ ಕ್ಯಾಮೆರಾ ಹಿಡಿದಿದ್ದಾರೆ. ಒಡೆಯ ಸಾಹಸ ಪ್ರಧಾನ ಚಿತ್ರವಾಗಿದೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ, ಡಾ.ವಿ.ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಕಲೆ, ನೃತ್ಯ ನಿರ್ದೇಶನ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಅಭಿನಯಿಸಿದೆ. ಡಿ ಬಾಸ್ ಅಭಿಮಾನಿಗಳಿಗೆ ಒಡೆಯ ಬಹಳ ಮೆಚ್ಚುಗೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಯಾವ ಪರಿ ಸಾಗಲಿದೆ ಎಂಬುದನ್ನು ನೋಡಬೇಕು.

Facebook Comments