ದರ್ಶನ್-ಉಮಾಪತಿ ಮನಸ್ತಾಪಕ್ಕೆ ಆಸ್ತಿ ಖರೀದಿ ವಿವಾದ ಕಾರಣ..!?
ಬೆಂಗಳೂರು, ಜು.17- ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಮನಸ್ತಾಪಕ್ಕೆ ಪ್ರಖ್ಯಾತ ನಟರಿಗೆ ಸೇರಿದ ಆಸ್ತಿ ಖರೀದಿ ವಿಷಯ ಕಾರಣವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಸಾಲ ಪಡೆಯಲು ಭದ್ರತೆ ಒದಗಿಸುವ ವಿಷಯದಲ್ಲಿ ಉಮಾಪತಿ ಮತ್ತು ದರ್ಶನ್ ನಡುವೆ ಚರ್ಚೆಗಳು ತಾರಕಕ್ಕೇರಿವೆ. ಇದಕ್ಕೂ ಮುನ್ನಾ ಉಮಾಪತಿ ಅವರು ಕನ್ನಡ ಚಿತ್ರರಂಗದ ಖ್ಯಾತ ನಟರ ಆಸ್ತಿಯನ್ನು ಅವರ ಮಕ್ಕಳಿಂದ ಖರೀದಿಸಿದ್ದರು.
ಆ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ದರ್ಶನ್ ತಮಗೆ ಅದನ್ನು ಬಿಟ್ಟು ಕೊಡುವಂತೆ ಕೇಳಿದ್ದರು. ಖ್ಯಾತ ನಟರಿಗೆ ಸೇರಿದ ಈ ಆಸ್ತಿಯನ್ನು ಮರು ಮಾರಾಟ ಮಾಡುವುದು ಸೂಕ್ತವಲ್ಲ ಎಂದು ಉಮಾಪತಿ ಹೇಳಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಅದರ ನಂತರ ಸಾಲ ಭದ್ರತೆಯ ವಿಷಯ ಚರ್ಚೆಗೆ ಬಂದಿತ್ತು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಕೇಂದ್ರಿತವಾಗಿ ಹಲವಾರು ವಿವಾದಗಳು ಹುಟ್ಟಿಕೊಂಡಿವೆ. ಸಾಲಭದ್ರತೆ ವಿಷಯದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಹೊಟೇಲ್ವೊಂದರ ಸಪ್ಲೈರ್ ಮೇಲೆ ಹಲ್ಲೆ ಮಾಡಿದ ಆರೋಪವೂ ದರ್ಶನ್ ಮೇಲೆ ಕೇಳಿ ಬಂದಿದೆ.
ಆರಂಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ದರ್ಶನ್ ನಿರ್ಮಾಪಕ ಉಮಾಪತಿ ಅವರ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದರು. ಆರೋಪ ಮತ್ತು ಪ್ರತ್ಯಾರೋಪದ ಬಳಿಕ ದರ್ಶನ್ ಖುದ್ದು ಉಮಾಪತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ನಾನು ನನ್ನ ನಿರ್ಮಾಪಕರನ್ನು ಬಿಟ್ಟುಕೊಡುವುದಿಲ್ಲ ಎಂದು ದರ್ಶನ್ ಹೇಳಿಕೆ ನೀಡಿದರು. ಈ ಎಲ್ಲಾ ವಿವಾದಗಳಿಗೆ ಆಸ್ತಿ ವಿಚಾರ ಮೂಲ ಎಂದು ಹೇಳಲಾಗಿದೆ.