ಕಾಡಿಗೆ ಹೋಗಲು ರಂಪಾಟ ಮಾಡಿದ ಲಕ್ಷ್ಮಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.10- ಒಂದೂವರೆ ತಿಂಗಳಿನಿಂದ ನಾಡಿನಲ್ಲಿ ಬೀಡು ಬಿಟ್ಟಿದ್ದ ಲಕ್ಷ್ಮಿ ಆನೆ ವಾಪಸು ಕಾಡಿಗೆ ಹೋಗಲು ಒಪ್ಪದೆ ರಂಪಾಟ ನಡೆಸಿದಳು. ಎರಡು-ಮೂರು ಬಾರಿ ಲಾರಿ ಸಮೀಪ ಕರೆತಂದು ಲಾರಿಗೆ ಹತ್ತಿಸಲು ಎಷ್ಟೆ ಪ್ರಯತ್ನ ಪಟ್ಟರೂ ತಪ್ಪಿಸಿಕೊಂಡು ಅರಮನೆ ಸುತ್ತ ಓಡಾಡಿ ಮಾವುತರಿಗೆ ಚಳ್ಳೆಹಣ್ಣು ತಿನ್ನಿಸಿದಳು.

ಹೀಗೆ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಲಕ್ಷ್ಮಿ ಆನೆ ರಂಪಾಟ ಮಾಡಿ ಸತಾಯಿಸಿದಳು. ಕಡೆಗೆ ಗೋಪಿ ಆನೆಯ ಸಹಾಯದಿಂದ ಲಕ್ಷ್ಮಿಯನ್ನು ಲಾರಿಗೆ ಹತ್ತಿಸಲು ಯತ್ನಿಸಿದಾಗ ಆ ಆನೆಯನ್ನೇ ಲಕ್ಷ್ಮಿ ಎಳೆದುಕೊಂಡು ಓಡಿ ಹೋಗಿಬಿಟ್ಟಳು.

ಇದರಿಂದ ಕಂಗಾಲಾದ ಮಾವುತರು ವಿಕ್ರಮ ಆನೆಯನ್ನು ಕರೆತಂದರು. ಈ ಎರಡು ಆನೆಗಳ ಸಹಾಯದಿಂದ ಲಕ್ಷ್ಮಿಯನ್ನು ಲಾರಿಗೆ ಹತ್ತಿಸಲು ಯತ್ನಿಸಿದರೂ ಕೂಡ ಲಕ್ಷ್ಮಿ ಜಗ್ಗದೆ ಅವುಗಳಿಗೂ ಆಟವಾಡಿಸಿದಳು. ಇದರಿಂದ ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷ್ಮಿಯನ್ನು ಲಾರಿಗೆ ಹತ್ತಿಸಲು ಹರಸಾಹಸಪಟ್ಟರು.

ಇದೇ ಮೊದಲ ಬಾರಿಗೆ ಲಕ್ಷ್ಮಿ ದಸರೆಯಲ್ಲಿ ಪಾಲ್ಗೊಳ್ಳಲು ಬಂಡೀಪುರದ ರಾಂಪುರ ಕ್ಯಾಂಪ್‍ನಿಂದ ಆಗಮಿಸಿದ್ದಳು. ಅಲ್ಲಿಂದ ನಗರಕ್ಕೆ ಬರುವಾಗ ಆರಾಮವಾಗಿ ಬಂದವಳು ಈಗ ವಾಪಸಾಗುವಾಗ ಹಠ ಹಿಡಿದಿರುವುದು ಸೋಜಿಗವಾಯಿತು.

Facebook Comments

Sri Raghav

Admin