ದಸರಾ ಮೈಸೂರಿಗಷ್ಟೇ ಸೀಮಿತವಾಗಬಾರದು : ಸಚಿವ ಜಿ.ಟಿ.ದೇವೇಗೌಡ
ಹುಣಸೂರು, ಸೆ.2- ವಿಶ್ವವಿಖ್ಯಾತ ದಸರಾ ಮಹೋತ್ಸವ ಮೈಸೂರಿಗಷ್ಟೇ ಸೀಮಿತವಾಗಬಾರದು, ಜಿಲ್ಲೆಯ ಎಲ್ಲಾ ಜನ ಒಂದಲ್ಲಾ ಒಂದು ರೀತಿಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ಶಕ್ತಿ ತುಂಬಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕರೆ ನೀಡಿದರು. ವೀರನಹೊಸಹಳ್ಳಿ ಗೇಟ್ ಬಳಿ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಮೊದಲ ತಂಡದ ಗಜಪಯಣಕ್ಕೆ ಹಾಡಿ ನಿವಾಸಿಗಳಾದ ತಾಯಮ್ಮ, ಪುಟ್ಟಯ್ಯ ಅವರ ಸಮ್ಮುಖದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಎಲ್ಲಾ ಹೋಬಳಿ ಮಟ್ಟದಲ್ಲಿ ಯುವ ದಸರಾ, ಮಹಿಳಾ ದಸರಾ ಹಮ್ಮಿಕೊಂಡು ಈ ಬಾರಿಯ ದಸರಾ ಮಾದರಿಯಾಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಈ ಬಾರಿ ಮುಂಗಾರು ಉತ್ತಮವಾಗಿದೆ. ಆದರೆ, ದಕ್ಷಿಣ ಭಾಗದಲ್ಲಿ ಅತಿವೃಷ್ಟಿಯಾಗಿದೆ, ಉತ್ತರ ಭಾಗದಲ್ಲಿ ಅನಾವೃಷ್ಟಿಯಾಗಿದೆ. ಇದರಿಂದ ಸಾಕಷ್ಟು ರೈತರು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಎಲ್ಲರಿಗೂ ನಷ್ಟತುಂಬಿಕೊಡಲು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬದ್ದವಾಗಿದೆ ಎಂದರು.
ಈಗಾಗಲೆ ನಾನಾ ರೀತಿಯಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಉದ್ಯಮಿಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಸರ್ಕಾರವೂ ಕೂಡ ಸಂತ್ರಸ್ತ ಕುಟುಂಬದವರ ಬದುಕು ಕಟ್ಟಿಕೊಡಲು ಸಿದ್ದವಿದೆ ಎಂದು ಹೇಳಿದರು. ರೈತರ ಸಾಲ ಮನ್ನಾ ಮಾಡಿರುವುದರಿಂದ ಅವರು ನಿರಾಳರಾಗಿದ್ದಾರೆ. ರೈತರಿಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಜಿ.ಟಿ.ದೇವೇಗೌಡ ಭರವಸೆ ನೀಡಿದರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಆದಿವಾಸಿ ಜನರಿಗೆ ಮನೆಗಳು, ಹಕ್ಕುಪತ್ರ ಒದಗಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಹೇಳಿದರು.
ಆದಿವಾಸಿ ಜನರಿಗೆ ಇನ್ನೂ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಅವರಿಗೆ ಎಲ್ಲಾ ಸೌಕರ್ಯ ಒದಗಿಸಿಕೊಡುವ ಕುರಿತು ಸಿಎಂ ಜತೆ ಚರ್ಚಿಸುವುದಾಗಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ. ಡಾ.ಜಯಮಾಲಾ, ಮಾಜಿ ಸಚಿವ ತನ್ವೀರ್ಸೇಠ್, ಶಾಸಕರಾದ ಎಚ್.ವಿಶ್ವನಾಥ್, ಅಶ್ವಿನ್ಕುಮಾರ್, ಕೆ.ಮಹದೇವ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಅರಣ್ಯಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.