ನ. 22ರಿಂದ ದತ್ತಮಾಲಾ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಅ.24- ಶ್ರೀ ರಾಮಸೇನೆ ವತಿಯಿಂದ ಈ ವರ್ಷದ ದತ್ತಮಾಲಾ ಅಭಿಯಾನ ವನ್ನು ನ. 22 ರಿಂದ 26 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಕೋವಿಡ್ ಬಿಕ್ಕಟ್ಟಿನಿಂದಾಗಿ ಶೋಭಾಯಾತ್ರೆ, ಧಾರ್ಮಿಕ ಸಭೆ ಮೊದಲಾದವನ್ನು ಕೈ ಬಿಡಲಾಗಿದೆ ಎಂದ ಅವರು, ನ.23ರಂದು ದತ್ತಪೀಠ ಹಿಂದುಗಳಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಪ್ರತಿ ಮನೆಯಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗುವುದು.

ನ.24ರಂದು 10 ಸಾವಿರ ಮಂದಿಯ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಗುವುದು. ನ. 25 ರಂದು ಪಡಿ ಸಂಗ್ರಹಿಸಿ ಕೊರೊನಾ ಮತ್ತು ಪ್ರವಾಹ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದರು.  ನ.26ರಂದು ದತ್ತಾತ್ರೇಯ ಪೀಠದಲ್ಲಿ ನಾಡಿನ ಪ್ರಮುಖ ಸಾಧು-ಸಂತರು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ತೆರಳಿ ಪಾದುಕೆಗಳ ದರ್ಶನ ದೊಂದಿಗೆ ಈ ಬಾರಿಯ ದತ್ತಮಾಲಾ ಅಭಿಯಾನ ಕೊನೆಗೊಳ್ಳಲಿದೆ ಎಂದರು.

ದತ್ತಪೀಠದಲ್ಲಿ ಅರ್ಚಕರ ನೇಮಕವಾಗಿ ಅಲ್ಲಿ ತ್ರಿಕಾಲ ಪೂಜೆ ನಡೆಯಬೇಕು, ಅಲ್ಲಿಯ ಗೋರಿಗಳನ್ನು ಸ್ಥಳಾಂತರಿಸಬೇಕು, ದತ್ತಾತ್ರೇಯ ವಿಗ್ರಹಗಳನ್ನ ಪ್ರತಿಷ್ಠಾಪಿಸಬೇಕು. ವಿಗ್ರಹ, ಕಾಣಿಕೆ, ನಾಪತ್ತೆಯಾಗಿರುವ ಬಗ್ಗೆ ಭೂಮಿ ಹಸ್ತಾಂತರ ವಾಗಿ ಮಾರಾಟ ವಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ದತ್ತಾತ್ರೇಯ ಪೀಠ ಎಂಬ ಒಂದೇ ಹೆಸರಿನಲ್ಲಿ ಕರೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಜೆಪಿ ಆಡಳಿತ ನಡೆಸುತ್ತಿದ್ದು ಈ ದತ್ತಪೀಠದ ಬಗ್ಗೆ ಕಾಳಜಿ ಇದ್ದರೆ ಹಿಂದುಗಳಿಗೆ ಒಪ್ಪಿಸಬೇಕು ಎಂದರು.  ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದ್ದು ಧರ್ಮದ ವಿಚಾರವನ್ನು ಮುಂದೂಡುತ್ತಾ ಹೋಗದೆ ಜನರು ರೊಚ್ಚಿಗೇಳುವ ಮೊದಲು ಹಿಂದುಗಳಿಗೆ ಒಪ್ಪಿಸಬೇಕು ಇಲ್ಲವಾದರೆ ಸರ್ಕಾರ ಸಮಾಜಕ್ಕೆ ದ್ರೋಹ ಬಗೆದಂತೆ ಎಂದರು.

ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಉಪಾಧ್ಯಕ್ಷ ಮಹೇಶ್ ಕುಮಾರ್ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾ ಸೇನೆಯ ಜಿಲ್ಲಾಧ್ಯಕ್ಷ ಶಾರದಮ್ಮ ಮೊದಲಾದವರಿದ್ದರು.

Facebook Comments