ಮಾವಿನ ಮರದ ಮೇಲಿದ್ದ 9.30 ಲಕ್ಷ ಮೌಲ್ಯದ ಚಿನ್ನಾಭರಣ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಜ.7- ಕಳವು ಮಾಡುತ್ತಿದ್ದ ಚಿನ್ನಾಭರಣವನ್ನು ಮರದ ಮೇಲೆ ಬಚ್ಚಿಟ್ಟು ತಲೆಮರೆಸಿಕೊಳ್ಳುತ್ತಿದ್ದ ನಾಲ್ಕು ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲಾಯಲ್ಲಿ ನಡೆದಿದ್ದ ಐದು ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ 9.30 ಲಕ್ಷ ಮËಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನ ಮೈಲಾರಿ ಅಲಿಯಾಸ್ ವಗ್ಗ ಮೈಲಾರಿ, ಕುಮಾರ ಅಲಿಯಾಸ್ ವಗ್ಗ ಕುಮಾರ, ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದ ಕೃಷ್ಣ ಅಲಿಯಾಸ್ ಖಾದರ್ ಕೃಷ್ಣ, ರಾಮ ಅಲಿಯಾಸ್ ಬುಡ್ಡರಾಮ ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಟಿ.ವಿ. ಚಂದ್ರಶೇಖರಯ್ಯ ಅವರ ನಲ್ಕುದುರೆ ಮನೆಯಿಂದ 2.80 ಲಕ್ಷ ಮೌಲ್ಯದ 4.6 ಕೆ.ಜಿ. ಬೆಳ್ಳಿಯ ಸೊತ್ತು ಕಳವಾಗಿದ್ದವು.

ಹೀಗೆ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಈ ನಾಲ್ಕು ಜನ ಕಳ್ಳರು ಕಾಕನೂರು ಬಳಿ ಒಂದು ಮಾವಿನ ಮರದ ಮೇಲೆ ಬಚ್ಚಿಡುತ್ತಿದ್ದರು. ಆ ಮರವನ್ನು ಆಗಾಗ ಬಂದು ನೋಡಿಕೊಂಡು ಹೊಗುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಹನುಮಂತರಾಯ ತಿಳಿಸಿದರು. ಅಜ್ಜಂಪುರ, ಹೊಳಲ್ಕೆರೆ, ಸಂತೇಬೆನ್ನೂರು, ಮಾಯಕೊಂಡ ಮತ್ತು ನಲ್ಕುದುರೆ ಕಡೆಗಳಲ್ಲಿ ಈ ನಾಲ್ಕು ಜನರು ಎರಡು ತಂಡಗಳನ್ನಾಗಿ ಮಾಡಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂದು ತಿಳಿಸಿದರು.

ಇವರು ಹಿಂದೆ ಹಲವು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿ ಈಗ್ಗೆ ಸುಮಾರು ಎರಡು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆ ಹೊಂದಿ ಈ ಅವಧಿಯಲ್ಲಿ ಕಳ್ಳತನ ಮಾಡಿದ್ದಾರೆ. ಸಂತೆಬೆನ್ನೂರು ಪೆಲೀಸ್ ಠಾಣೆ ವ್ಯಾಪ್ತಿಯ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಳಾದ ಕೃಷ್ಣ, ರಾಮ ಬಂಧಿಸಿ, ಸುಮಾರು 2 ಲಕ್ಷದ 80 ಸಾವಿರ ಮೌಲ್ಯದ 4 ಕೆಜಿ 600 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ತಂಡದ ಮೈಲಾರಿ, ಕುಮಾರನನ್ನು ಬಂಧಿಸಿ, ಮಾಯಕೊಂಡ ಠಾಣೆ, ಅಜ್ಜಂಪುರ ಪೆಲೀಸ್ ಠಾಣೆ, ಹೊಳಲ್ಕೆರೆ ಪೊಲೀಸ್ ಠಾಣೆ ಸೇರಿ ಒಟ್ಟು 4 ಪ್ರಕರಣಗಳನ್ನು ಪತ್ತೆ ಹಚ್ಚಿ, ಸುಮಾರು 6 ಲಕ್ಷ ರೂ. ಮೌಲ್ಯದ 120 ಗ್ರಾಂ ತೂಕದ ಬಂಗಾರದ ಆಭರಣಗಳು 50 ಸಾವಿರ ರೂ. ಮೌಲ್ಯದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಎಸ್ಪಿ ಹನುಮಂತರಾಯ ಶ್ಲಾಘಿಸಿ, ಪ್ರಸಂಶನಾ ಪತ್ರ ನೀಡಿದರು. ಈ ಪ್ರಕರಣಗಳನ್ನು ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಜಿ. ಮನ್ನೋಳಿ ಮಾರ್ಗದರ್ಶನದಲ್ಲಿ ಚನ್ನಗಿರಿ ವೃತ್ತದ ಸಿಪಿಐ ಆರ್.ಆರ್.ಪಾಟೀಲ್ ನೇತೃತ್ವದಲ್ಲಿ ಸಂತೇಬೆನ್ನೂರು ಪಿಎಸ್‍ಐ ಶಿವರುದ್ರಪ್ಪ ಎಸ್. ಮೇಟಿ ಹಾಗೂ ಸಿಬ್ಬಂದಿಗಳಾದ ಎಂ. ರುದ್ರೇಶ, ಎಸ್.ಆರ್.ರುದ್ರೇಶ, ಡಿ.ನಿಂಗಣ್ಣ, ಎಸ್. ಧರ್ಮಪ್ಪ ಕೊಟ್ರೇಶ , ನಾಗರಾಜ ನಾಯ್ಕ , ರಂಗಸ್ವಾಮಿ , ಯಶವಂತ , ಯೋಗೇಶ, ರೇವಣಸಿದ್ದಪ್ಪ , ಸೋಮಶೇಖರ ಮತ್ತು ಜಿಲ್ಲಾ  ಪೊಲೀಸ್ ಕಚೇರಿಯ ಬೆರಳು ಮುದ್ರೆ ಘಟಕದ ಪಿಎಸ್‍ಐ ಮಂಜುನಾಥ ಮತ್ತು ಅವರ ತಂಡ, ರಾಘವೇಂದ್ರ ಮತ್ತು ತಂಡವು ಬೇಧಿಸಿದೆ.

ಮನೆಗೆ ಬೀಗ ಹಾಕಿ ಊರಿಗೆ ಹೋಗುವಾಗ ಪೊಲೀಸರಿಗೆ ತಿಳಿಸಬೇಕು. ರಾತ್ರಿ ಬೆಳಕಿನ ವ್ಯವಸ್ಥೆ ಮಾಡಿರಬೇಕು. ಪೂರ್ತಿ ಕತ್ತಲು ತುಂಬಿ ಮನೆಯಲ್ಲಿ ಯಾರೂ ಇಲ್ಲ ಎಂಬುದು ಗೊತ್ತಾಗುವಂತಿರಬಾರದು. ಮನೆಗೆ ಬೀಗ ಹಾಕಿದೆ ಎಂದು ಹೊರಗೆ ಗೊತ್ತಾಗ ಬಾರದು. ದೊಡ್ಡ ಕಾಂಪ್ಲೆಕ್ಸ್‍ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರಬೇಕು. ಆಗ ಕಳವು ಪ್ರಕರಣ ನಿಯಂತ್ರಿಸ ಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಇದೇ ವೇಳೆ ಸಲಹೆ ನೀಡಿದರು. ಚನ್ನಗಿರಿ ತಾಲ್ಲೂಕು ಎಂಬುದು ಮೂರು ಜಿಲ್ಲಾ ಗಳ ಗಡಿ ಆಗಿರುವುದರಿಂದ ಅಲ್ಲಿ ವಿಶೇಷ ನಾಕಾಬಂದಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

Facebook Comments