ದೇವೇಂದರ್ ಸಿಂಗ್ ನಿವಾಸದಲ್ಲಿ ಸೇನಾ ಕಚೇರಿಸ್ಥಳ ನಕ್ಷೆಗಳು, 7.5 ಲಕ್ಷ ನಗದು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ಜ.16-ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿತನಾಗಿ ಅಮಾನತುಗೊಂಡಿರುವ ಡಿವೈಎಸ್ಪಿ ದೇವೇಂದರ್ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸ್ ಅಧಿಕಾರಿಗಳ ತಂಡ, ಶ್ರೀನಗರದ ಸೇನೆಯ 15ನೇ ಕಾಪ್ರ್ಸ್ ಮುಖ್ಯ ಕೇಂದ್ರ ಕಚೇರಿಯ ಸ್ಥಳ ನಕ್ಷೆಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಶ್ರೀನಗರ ಮನೆ ಬಾದಾಮಿ ಬಾಗ್ ಕಂಟೋನ್ಮೆಂಟ್‍ನಲ್ಲಿರುವ ಸೈನ್ಯದ 15 ಕಾಪ್ರ್ಸ್ ಪ್ರಧಾನ ಕಚೇರಿಯ ಪಕ್ಕದಲ್ಲೇ ದೇವೇಂದರ್ ಸಿಂಗ್ ನಿವಾಸವಿದ್ದು, ಇಂದು ದಾಳಿ ನಡೆಸಿರುವ ಪೊಲೀಸರು ದಾಖಲೆಗಳಿಲ್ಲದ 7.5 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.  ಅಲ್ಲದೆ ಶ್ರೀನಗರದ ಅತ್ಯಂತ ಸುರಕ್ಷಿತ ವಲಯವೆಂದು ಪರಿಗಣಿಸಲಾಗಿರುವ ಇಂದಿರಾನಗರದಲ್ಲೂ ಡೇವಿಂದರ್ ಸಿಂಗ್ ಭವ್ಯ ಭವನವನ್ನು ನಿರ್ಮಿಸುತ್ತಿದ್ದು, ಈ ಭವನ 15 ಕಾಪ್ರ್ಸ್ ಕೇಂದ್ರ ಕಚೇರಿ ಇರುವ ಬಾದಾಮಿ ಕಂಟೋನ್ಮೆಂಟ್‍ಗೆ ಸಂಪರ್ಕ ಹೊಂದಿದೆ.

ಕಳೆದ ಐದು ವರ್ಷಗಳಿಂದ ಡೇವಿಂದರ್ ಸಿಂಗ್ ತನ್ನ ಸಂಬಂಧಿಗೆ ಸೇರಿದ ಬಾಡಿಗೆಮನೆಯಲ್ಲಿ ವಾಸವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜ.11ರಂದು ದೇವೇಂದರ್ ಸಿಂಗ್ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಇಬ್ಬರು ಉಗ್ರರ ಜೊತೆ ಮಾರುತಿ ಕಾರಿನಲ್ಲಿ ಹೊರಟಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ. ಬಂಧಿತನಿಂದ ಎರಡು ಪಿಸ್ತೂಲ್, ಎಕೆ ರೈಫಲ್ ಮತ್ತು ಹೆಚ್ಚಿನ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೀಗ ಜಮ್ಮುಕಾಶ್ಮೀರದ ಪೊಲೀಸರು ಮತ್ತು ಸೇನೆ ಈತನ ಜನ್ಮವನ್ನೇ ಜಾಲಾಡುತ್ತಿದೆ. ಮೂಲಗಳ ಪ್ರಕಾರ ದೇವೇಂದರ್ ಸಿಂಗ್ ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಕೆಲವು ಉಗ್ರಗಾಮಿ ಸಂಘಟನೆಗಳು ಮತ್ತು ಉಗ್ರರಿಂದ ಹಣ ಪಡೆದಿದ್ದಾನೆ ಎಂಬ ಆರೋಪಗಳು ಕೇಳಿಬಂದಿದೆ.

ಸುಮಾರು 25 ವರ್ಷಗಳ ಕಾಲ ಜಮ್ಮುಕಾಶ್ಮೀರದ ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ದೇವೇಂದರ್ ಸಿಂಗ್‍ಗೆ ಮುಂಬಡ್ತಿ ನೀಡುವ ಕಡತ ಜಮ್ಮುಕಾಶ್ಮೀರದ ಗೃಹ ಇಲಾಖೆಯ ಆಯುಕ್ತರ ಮುಂದಿತ್ತು.

Facebook Comments