ವಿಶ್ವ ಆರ್ಥಿಕ ಶೃಂಗಸಭೆಗೆ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.19- ಸ್ವಿಡ್ಜರ್ ಲ್ಯಾಂಡ್‍ನ ದಾವೋಸ್‍ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಿಯೋಗ ಇಂದು ಪ್ರಯಾಣ ಬೆಳೆಸಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆ ಪ್ರಧಾನಕಾರ್ಯದರ್ಶಿ ಗೌರವ್‍ಗುಪ್ತ,

ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್‍ಕೃಷ್ಣ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಕೆ.ಸಿ.ರುದ್ರಪ್ಪಯ್ಯ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಟಿ.ವಿ.ಮರಮಕಲ್, ಬೃಹತ್ ಕೈಗಾರಿಕೆ ಸಚಿವರ ವಿಶೇಷ ಅಧಿಕಾರಿ ದವಳೇಶ್ವರ್ ದಾವೋಸ್‍ಗೆ ತೆರಳಿದರು.

ಇಂದು ಬೆಳಗ್ಗೆ 10.15ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿ ನಂತರ ಜೂರಿಚ್‍ಗೆ ಹೋಗಿ ಬಳಿಕ ಅಲ್ಲಿಂದ ದಾವೋಸ್‍ನತ್ತ ಪ್ರಯಾಣ ಬೆಳೆಸುವರು.
ನಾಳೆಯಿಂದ 23ರವರೆಗೆ ನಡೆಯುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಂಬಂಧ ವಿಶ್ವದ ಮುಂಚೂಣಿಯಲ್ಲಿರುವ ಉದ್ಯಮಿಗಳ ಜತೆ ಮುಖ್ಯಮಂತ್ರಿ ಸೇರಿದಂತೆ ನಿಯೋಗವು ಮಾತುಕತೆ ನಡೆಸಲಿದೆ.

ಬಂಡವಾಳ ಹೂಡಿಕೆಗಿರುವ ವಿಫುಲ ಅವಕಾಶಗಳು, ಕೈಗಾರಿಕೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ರಾಜ್ಯ ಸಾಧಿಸಿರುವ ಪ್ರಗತಿ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ರಾಜ್ಯದ ನಿಯೋಗ ಉದ್ಯಮಿಗಳ ಜತೆ ಸಂವಾದ ನಡೆಸಲಿದೆ. ರಾಜ್ಯದಲ್ಲಿ ಬಂಡವಾಳ ಹೂಡಲು ಮುಖ್ಯಮಂತ್ರಿಗಳು ಉದ್ಯಮಿಗಳನ್ನು ಆಹ್ವಾನಿಸುವರು. ಶುಕ್ರವಾರ ಮುಂಜಾನೆ ದಾವೋಸ್‍ನಿಂದ ದುಬೈಗೆ ಆಗಮಿಸಿ ಅಲ್ಲಿಂದ ಬೆಂಗಳೂರಿಗೆ ಆಗಮಿಸುವರು.

ಬೀಳ್ಕೊಡುಗೆ: ಇನ್ನು ದಾವೋಸ್‍ಗೆ ಹೊರಟ ಮುಖ್ಯಮಂತ್ರಿ ಹಾಗೂ ಅವರ ನಿಯೋಗವನ್ನು ಸಂಪುಟದ ಸಹೋದ್ಯೋಗಿಗಳು ಬೀಳ್ಕೊಟ್ಟರು. ಸಚಿವ ಪ್ರಭುಚವ್ಹಾಣ್, ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್, ಮುಖ್ಯಮಂತ್ರಿಗಳ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಶಾಸಕರು, ಪಕ್ಷದ ಮುಖಂಡರು, ಅಭಿಮಾನಿಗಳು ಬೀಳ್ಕೊಟ್ಟರು.

ನೆವಿ ಗ್ರೇ ಬಣ್ಣದ ಕೋಟ್, ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಬಣ್ಣ ಶೂ ಧರಿಸಿದ್ದ ಯಡಿಯೂರಪ್ಪನವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅನುಗುಣವಾಗಿ ವಿಶೇಷವಾದ ಧಿರಿಸುಗಳನ್ನು ಖರೀದಿ ಮಾಡಿದ್ದಾರೆ. ಇನ್ನು ಸಿಎಂ ಅವರ ದವಳಗಿರಿ ನಿವಾಸದಲ್ಲಿ ಬೆಳಗ್ಗಿನಿಂದ ಹಬ್ಬದ ವಾತಾವರಣ ಮೂಡಿತ್ತು.

Facebook Comments