ಆಹಾರ, ಮಾಸ್ಕ್‌ ವಿತರಿಸಿ ಸಿಕ್ಕಿಂ ಮೂಲದವರನ್ನು ಬೀಳ್ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕೊವಿಡ್‌ ಲಾಕ್‌ಡೌನ್‌ ಸಡಲಿಕೆ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಪ್ರಯಾಣ ಬೆಳೆಸಿರುವ ಸಿಕ್ಕಿಂ ಮೂಲದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಆಹಾರ ಮತ್ತು ಮಾಸ್ಕ್‌, ಸ್ಯಾನಿಟೈಸರ್ ಕಿಟ್‌ ನೀಡಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಬೀಳ್ಕೊಟ್ಟರು.

ಸಿಕ್ಕಿಂಗೆ ಪ್ರಯಾಣ ಬೆಳೆಸಿರುವ ಜನರನ್ನು ಮಂಗಳವಾರ ಆರ್‌ಟಿ ನಗರದಲ್ಲಿ ಭೇಟಿಯಾಗಿ, ಕಿಟ್‌ ವಿತರಿಸಿದ ಬಳಿಕ ಡಾ. ಅಶ್ವತ್ಥನಾರಾಯಣ ಮಾತನಾಡಿದರು.

“ಶಿಕ್ಷಣ ಹಾಗೂ ಉದ್ಯೋಗದ ನಿಮಿತ್ತ ನಗರದಲ್ಲಿ ನೆಲೆಸಿರುವ ಸಿಕ್ಕಿ ಮೂಲದವರು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಲು ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಕ್ಕೆ ಅನುಕೂಲವಾಗುವಂತೆ 1000 ಮಂದಿಗೆ ಡಾ. ಅಶ್ವತ್ಥನಾರಾಯಣ ಫೌಂಡೇಶನ್ ವತಿಯಿಂದ ಮಾಸ್ಕ್‌, ಸ್ಯಾನಿಟೈಸರ್‌ ಕಿಟ್‌ ಹಾಗೂ ಆಹಾರವನ್ನು ಪೂರೈಸಲಾಗಿದೆ,”ಎಂದರು.

ಸಿಕ್ಕಿಂ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, “ಬದುಕು ಕಟ್ಟಿಕೊಳ್ಳಲು ಬೆಂಗಳೂರು ಅತ್ಯಂತ ಪ್ರಶಸ್ತ ಸ್ಥಳ. ನಿಮ್ಮ ಮನೆಯವರನ್ನು ಭೇಟಿ ಮಾಡಿ ವಾಪಸ್‌ ಬನ್ನಿ. ಕರ್ನಾಟಕದಲ್ಲಿ ನಿಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.

ನಿಮಗೆ ಎಲ್ಲಾ ರೀತಿಯ ಸೇವೆ, ಬೆಂಬಲ ನೀಡಲು ಸರ್ಕಾರ ಸಿದ್ಧ. ನಿಮ್ಮ ಸಲಹೆ ಹಾಗೂ ಅಭಿಪ್ರಾಯವನ್ನು ನಮ್ಮ ಜತೆ ಹಂಚಿಕೊಳ್ಳಿ. ನಿಮ್ಮ ಪ್ರಯಾಣ ಸುರಕ್ಷಿತವಾಗಿರಲಿ,” ಎಂದು ಹಾರೈಸಿದರು.

# ಸಿಕ್ಕಿಂ ಸಿಎಂ ಅಭಿನಂದನೆ :
“ಬೆಂಗಳೂರಿನಲ್ಲಿ ನೆಲೆಸಿದ್ದ ಸಿಕ್ಕಿಂ ಮೂಲದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಆಹಾರ, ಮಾಸ್ಕ್‌, ವಿತರಿಸಿ, ಆತ್ಮೀಯವಾಗಿ ಬೀಳ್ಕೊಟ್ಟ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ದೂರವಾಣಿ ಕರೆ ಮಾಡಿದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌, ಸಹಕಾರಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

Facebook Comments

Sri Raghav

Admin