ರಾಮನಗರದಲ್ಲಿ ಹೆಚ್ಚು ಕೋವಿಡ್ ಲಸಿಕೆ ನೀಡಲು ಡಿಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ಕೋವಿಡ್ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವ ಮೂಲಕ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯಕ್ಕೆ ರಾಮನಗರ ಜಿಲ್ಲೆ ಮಾದರಿಯಾಗಿರಬೇಕು ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಸೂಚಿಸಿದ್ದಾರೆ. ರಾಮನಗರ ಜಿಲ್ಲಾಡಳಿತದೊಂದಿಗೆ ವರ್ಚುವಲ್ ಸಭೆ ನಡೆಸಿ ಕೋವಿಡ್ ನಿರ್ವಹಣೆಯ ಸ್ಥಿತಿಗತಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕೋವಿಡೇತರ ರೋಗಗಳಿಗೂ ಆಸ್ಪತ್ರೆಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಚಿಕಿತ್ಸೆ ಮುಂದುವರಿದಿದೆ ಎಂದರು.

ಇಂದು ರಾಮನಗರ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಾದ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಚರ್ಚೆ ನಡೆಸಿದ್ದು, ಸೂಕ್ತ ಸಲಹೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲೆಯ ಸ್ಥಿತಿಗತಿ ಮಾಹಿತಿ ನೀಡಿದ್ದಾರೆ. 1100 ಕೋವಿಡ್ ಪರೀಕ್ಷೆಗಳನ್ನು ಪ್ರತಿನಿತ್ಯ ಮಾಡಲಾಗುತ್ತಿದೆ. ಕೋವಿಡ್ ಪಾಸಿಟಿವ್ ಇದ್ದವರನ್ನು ಕೋವಿಡ್ ಕೇರ್ ಕೇಂದ್ರ ಹಾಗೂ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.

ಇದುವರೆಗೂ ಯಾರನ್ನೂ ಹೋಂ ಐಸೊಲೇಷನ್ ಮಾಡಿಲ್ಲ. ಕೋವಿಡ್‍ಗೆ ಸಂಬಂಧಿಸಿದಂತೆ ಔಷಧಿ ಕೊರತೆ ಇಲ್ಲ. ಉತ್ತಮ ನಿರ್ವಹಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ರೋಗ ಲಕ್ಷಣ ಕಂಡುಬಂದವರು ತಕ್ಷಣವೇ ಪರೀಕ್ಷೆಗೆ ಒಳಗಾಗಬೇಕು. ಪರೀಕ್ಷಾ ವರದಿಯನ್ನು ತ್ವರಿತವಾಗಿ ನೀಡಬೇಕು. ಸೋಂಕಿತರಿಗೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಬೇಕು. ಆರಂಭದಲ್ಲೇ ರೋಗ ಪತ್ತೆಹಚ್ಚಿ ಚಿಕಿತ್ಸೆ ನೀಡುವುದರಿಂದ ಸೋಂಕು ಹರಡುವಿಕೆ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಹೇಳಿದರು.

Facebook Comments