ಡಿ..ಜಿ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರೀ ಪ್ಲಾನ್ಡ್ : ಡಿಸಿಎಂ ಅಶ್ವತ್ಥನಾರಾಯಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದೇವರಜೀವನಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್’ಭೈರಸಂದ್ರದಲ್ಲಿ ನಡೆದ ಗಲಭೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರವೇ ಇದೆ. ಮಂಗಳೂರಿನಲ್ಲಿ ನಡೆಸಿದ್ದ ರೀತಿಯಲ್ಲಿಯೇ ಇಲ್ಲಿಯೂ ಹಿಂಸಾಚಾರ ನಡೆಸಲಾಗಿದೆ.

ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಗುಡುಗಿದ್ದಾರೆ.

ದಾಳಿಕೋರರಿಂದ ಹಾನಿಗೊಳಗಾಗಿದ್ದ ದೇವರಜೀವನಹಳ್ಳಿ ಹಾಗೂ ಗಲಭೆಪೀಡಿತ ಪ್ರದೇಶಗಳಿಗೆ ಬುಧವಾರ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಜತೆ ಭೇಟಿ ನೀಡಿ ಪರಿಶೀಲಿಸಿದ ಅವರು, ಹಿಂಸಾಚಾರದ ನಂತರದ ದೃಶ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ.

ಯಾವ ರೀತಿಯಲ್ಲಿ ಭಾರೀ ಸಂಚು ರೂಪಿಸಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಲಾಗಿದೆ ಎಂದು. ಠಾಣೆಗೆ ಬರುವ ದಾರಿಯಲ್ಲಿಯೇ ಇದನ್ನು ರುಜುವಾತುಪಡಿಸುವ ಅನೇಕ ಸ್ಪಷ್ಟವಾದ ಸಾಕ್ಷಿಗಳಿವೆ. ಯಾರೊಬ್ಬರೂ ಠಾಣೆಗೆ ಬರದಂತೆ ಅಡ್ಡಿಪಡಿಸಲು ಎಲ್ಲ ರೀತಿಯ ಸಂಚುಗಳನ್ನು ಮಾಡಲಾಗಿದೆ ಎಂದು ಹೇಳಿದರು.

ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಪೊಲೀಸರನ್ನು ಕೊಲ್ಲುವ ದುರುದ್ದೇಶ ಇಟ್ಟುಕೊಂಡೇ ಈ ಗಲಾಟೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುವ ಉದ್ದೇಶದಿಂದಲೇ ಠಾಣೆಗೆ ಬೆಂಕಿ ಹಚ್ಚಿ ಸಿಬ್ಬಂದಿಯ ಪ್ರಾಣ ತೆಗೆಯಲು ದುಷ್ಕೃತ್ಯ ಮಾಡಿರುವುದು ಖಂಡನೀಯ.

ತಪ್ಪು ಮಾಡಿದ ಪ್ರತಿಯೊಬ್ಬರೂ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ. ಸರಕಾರವೂ ಗಲಭೆ ಮಾಡಿ ಬಿಲಗಳಲ್ಲಿ ಅಡಗಿಕೂತಿರುವ ಎಲ್ಲ ಇಲಿಗಳನ್ನು ಬೋನಿಗೆಳೆಯಲಿದೆ. ಅವರ ವಿರುದ್ಧ ತೀವ್ರವಾದ ಕ್ರಮ ಜರುಗಿಸಲಾಗುವುದು.

ಕನಸು-ಮನಸ್ಸಿನಲ್ಲೂ ಇಂಥ ಹೀನಕೃತ್ಯಗಳನ್ನು ಮಾಡಲು ಹೆದರಬೇಕು. ಆ ರೀತಿಯಲ್ಲಿ ಪಾಠ ಕಲಿಸಲಾಗುವುದು. ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

# ಕಾಂಗ್ರೆಸ್ ವಿರುದ್ಧ ಗರಂ:
ಫೇಸ್’ಬುಕ್ ನಲ್ಲಿ ಪೋಸ್ಟ್ ಹಾಕಿರುವ ನವೀನ್ ಎಂಬ ಯುವಕ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪ ಮಾಡಿದೆ ಎಂದು ಸುದ್ದಿಗಾರರ ಗಮನ ಸೆಳೆದಾಗ ಗರಂ ಆದ ಡಿಸಿಎಂ, ಆ ಪಕ್ಷದ ನಾಯಕರಿಗೆ ರಾಜಕೀಯ ಮಾಡೋದು ಬಿಟ್ಟರೆ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲಾಗದ ಅಸಹಾಯಕತೆ ಆ ಪಕ್ಷದ ನಾಯಕರನ್ನು ಕಾಡುತ್ತಿದೆ.

ಅದಕ್ಕೆ ಈ ರೀತಿಯ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆ ವ್ಯಕ್ತಿಯೇ ಕಾಂಗ್ರೆಸ್ ಕಾರ್ಯಕರ್ತ ಎಂದು ಪೋಸ್ಟ್ ಹಾಕಿಕೊಂಡಿದ್ದಾನೆ. ಹೀಗಾಗಿ ಅವರು ಜನರನ್ನು ದಿಕ್ಕು ತಪ್ಪಿಸುವುದನ್ನು ಇನ್ನಾದರು ನಿಲ್ಲಿಸಬೇಕು ಎಂದು ತರಾಟೆಗೆ ತಗೆದುಕೊಂಡರು.

ಇನ್ನೊಬ್ಬರ ಪ್ರಾಣ ತೆಗೆಯಲು ಬಂದವರಿಗೆ, ಪೊಲೀಸ್ ಠಾಣೆಗೆ ಬೆಂಕಿ ಇಡಲು ಬಂದವರಿಗೆ ಪರಿಹಾರ ನೀಡಲು ಸಾಧ್ಯವೇ? ಮುಂದೆ ಏನು ಮಾಡಬೇಕು ಎಂಬುದನ್ನು ಸರಕಾರ ಪರಿಶೀಲಿಸಿ ನಿರ್ಧಾರ ಮಾಡುತ್ತದೆ ಎಂದು ಡಿಸಿಎಂ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

Facebook Comments

Sri Raghav

Admin