ಕೆಂಪೇಗೌಡರ ಸಮಾಧಿ ಸೇರಿ ಕೋಟೆ, ಸ್ಮಾರಕಗಳ ಅಭಿವೃದ್ಧಿ : ಡಿಸಿಎಂ
ಬೆಂಗಳೂರು, ಅ.20- ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಸೇರಿದಂತೆ ಅವರ ಎಲ್ಲ ಕೊಡುಗೆಗಳು, ಸ್ಮಾರಕಗಳನ್ನು ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಡಿಸಿಎಂ ಡಾ. ಸಿ.ಅಶ್ವಥ್ನಾರಾಯಣ್ ಭರವಸೆ ನೀಡಿದ್ದಾರೆ.
ಇಂದು ಮಾಗಡಿ ತಾಲೂಕು ಹಂಪಾಪುರ ಗ್ರಾಮದಲ್ಲಿರುವ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ನಿರ್ಮಿಸಿದ್ದ ಕೋಟೆ, ಕೆರೆಗಳು,ದುರ್ಗಗಳು ಸೇರಿದಂತೆ ಎಲ್ಲವನ್ನೂ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ನಾವು ಬರೀ ಮಾತಿನಲ್ಲಿ ಹೇಳುವುದಿಲ್ಲ ಕೆಲಸ ಮಾಡಿ ತೋರಿಸುತ್ತೇವೆ. ಇಡೀ ನಾಡು ಅಷ್ಟೇ ಅಲ್ಲ ವಿಶ್ವವೇ ತಿರುಗಿ ನೋಡುವಂತೆ ಮಾಡುತ್ತೇವೆ ಎಂದು ತಿಳಿಸಿದರು. ಈಗಾಗಲೆ ಜಿಲ್ಲಾಧಿಕಾರಿಗಳ ಜತೆ ಸಾಕಷ್ಟು ಸಭೆ ನಡೆಸಿದ್ದೇನೆ. ಅಲ್ಲದೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಜತೆಯೂ ಮಾತುಕತೆ ನಡೆಸಿದ್ದೇವೆ. ನಾನು ಇಲ್ಲಿಯವನೇ, ಇಲ್ಲಿನ ಅಭಿವೃದ್ಧಿಯೇ ನನ್ನ ಗುರಿ ಎಂದು ಸ್ಪಷ್ಟಪಡಿಸಿದರು.
ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗಾಗಿ ನೀಲನಕ್ಷೆ ಸಿದ್ಧಪಡಿಸಲು ಹೈಡಕ್ ಎಂಬ ಏಜೆನ್ಸಿಗೆ ವಹಿಸಲಾಗುವುದು ಈಗಾಗಲೇ ನಮ್ಮ ಸರ್ಕಾರ 150ಕೋಟಿ ರೂ. ಮಂಜೂರು ಮಾಡಿದೆ. ಕೇವಲ ಮಾತಲ್ಲ ಕೃತಿಯನ್ನು ನೋಡಿ ಎಂದು ಹೇಳಿದರು. ಕೆಂಪೇಗೌಡರ ಕೊಡುಗೆಗಳನ್ನು ಉಳಿಸಿಕೊಳ್ಳುವಲ್ಲಿ ಯಾವ ಸರ್ಕಾರಗಳು ಯಶಸ್ವಿಯಾಗಿಲ್ಲ. ಈಗ ನಮ್ಮ ಸರ್ಕಾರ ಅವರ ಎಲ್ಲಾ ಕೊಡುಗೆಗಳನ್ನು ಉಳಿಸಿಕೊಳ್ಳಲು ಮುಂದಾಗಿದ್ದೇವೆ.
ಅವರು ನಿರ್ಮಿಸಿದ ಕೋಟೆಗಳು, ದೇವಸ್ಥಾನಗಳು, ಕೆರೆಗಳನ್ನು ಅಭಿವೃದ್ಧಿಪಡಿಸಿ ಹಂಪಾಪುರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಬೆಳೆಯುವಂತೆ ಮಾಡುತ್ತೇವೆ ಎಂದು ತಿಳಿಸಿದರು. ಬೆಂಗಳೂರಿನ ನಾಗರಿಕರು ಈ ಸ್ಥಳಕ್ಕೆ ಭೇಟಿ ನೀಡಿ ಕೆಂಪೇಗೌಡರನ್ನು ಸ್ಮರಿಸಿ ಅವರ ಪ್ರೇರಣೆ ಪಡೆದುಕೊಂಡು ಬದುಕು ಸಾರ್ಥಕಪಡಿಸಿಕೊಳ್ಳಬೇಕೆಂದು ಅಶ್ವಥ್ನಾರಾಯಣ್ ಸಲಹೆ ನೀಡಿದರು.
ನಾನು ನಾಳೆಯಿಂದಲೇ ರಾಮನಗರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ಜನರ ಭಾವನೆಗೆ ಪೂರಕವಾಗಿ ಕೆಲಸ ಮಾಡುತ್ತೇನೆ. ಇಡೀ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುವುದೇ ನನ್ನ ಗುರಿ ಎಂದು ಹೇಳಿದರು.