ವಿಪಕ್ಷ ನಾಯಕರು ಜನರ ದಿಕ್ಕುತಪ್ಪಿಸುವ ಕೆಲಸ ಮಾಡಬಾರದು : ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.14- ಕೊರೊನಾ ನಿಯಂತ್ರಿಸಲು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರುಗಳು ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕೆ ಹೊರತು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರೇ ಆಗಲಿ ಆಡಳಿತದಲ್ಲಿ ಅನುಭವವಿರುವವರು ಜನರ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡಬೇಡಿ ಎಂದು ಟೀಕಾಪ್ರಹಾರ ನಡೆಸಿದರು.

ಪ್ರತಿಪಕ್ಷಗಳು ಈವರೆಗೂ ಸರ್ಕಾರಕ್ಕೆ ಯಾವತ್ತಾದರೂ ಒಂದೇ ಒಂದು ಉತ್ತಮವಾದ ಸಲಹೆ ನೀಡಿದ್ದಾವಾ? ಕೇವಲ ನಕಾರಾತ್ಮಕವಾಗಿ ಮಾತನಾಡುವುದೇ ಅವರಿಗೆ ಅಭ್ಯಾಸವಾಗಿದೆ. ಪ್ರತಿಯೊಂದನ್ನೂ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು. 13 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಆಡಳಿತದಲ್ಲಿ ಅಪಾರ ಅನುಭವವುಳ್ಳವರು. ಸರ್ಕಾರಕ್ಕೆ ಇಂತಹ ಸಂದರ್ಭದಲ್ಲಿ ಸಲಹೆ ಕೊಡಬೇಕೆ ಹೊರತು ನಕಾರಾತ್ಮಕ ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ನಿಯಂತ್ರಿಸಲು ಸರ್ಕಾರ ಎಲ್ಲ ರೀತಿಯ ಸರ್ವಪ್ರಯತ್ನ ಮಾಡಿದೆ. ನೀವು ಏನೇ ಸಲಹೆ-ಸೂಚನೆ ಕೊಡುವುದಿದ್ದರೆ ಸರ್ವಪಕ್ಷ ಸಭೆಯಲ್ಲಿ ಮುಕ್ತವಾಗಿ ಹೇಳಿ. ನೀವು ಏನೇ ಹೇಳಿದರೂ ಅದನ್ನು ಸರ್ಕಾರ ಸಕಾರಾತ್ಮಕವಾಗಿ ತೆಗೆದುಕೊಳ್ಳಲಿದೆ. ಎಲ್ಲದಕ್ಕೂ ಕೊಂಕು ನುಡಿಯುವುದು ಬೇಡ ಎಂದು ಮನವಿ ಮಾಡಿದರು. ನಮ್ಮ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮೊದಲ ದಿನದಿಂದಲೂ ತೆಗೆದುಕೊಂಡಿದೆ. ಏಪ್ರಿಲ್‍ನಲ್ಲಿ ಎರಡನೆ ಅಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಸೂಚನೆ ಕೊಟ್ಟಿದ್ದರು. ಅದಕ್ಕೆ ತಕ್ಕಂತೆ ನಾವು ಪೂರ್ವಸಿದ್ಧತೆ ಕೈಗೊಂಡಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡರು.

ಲಾಕ್‍ಡೌನ್ ಜಾರಿ ಮಾಡಿದರೆ ಜನರ ಖಾತೆಗಳಿಗೆ 10 ಸಾವಿರ ಹಣ ಹಾಕಬೇಕೆಂದು ಸಿದ್ದರಾಮಯ್ಯ ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ವಾಸ್ತವವಾಗಿ ಇದು ಸಾಧ್ಯವೆ ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು. ಮೊದಲು ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಮತ್ತೆ ಇದನ್ನು ಜಾರಿ ಮಾಡಿದರೆ ಜನರ ಜೀವನ ಇನ್ನಷ್ಟು ದುಸ್ಥಿತಿಗೆ ಹೋಗಲಿದೆ. ಸರ್ಕಾರದ ಮುಂದೆ ಈ ಆಯ್ಕೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಹೇಳುವುದಾದರೆ ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರವಲ್ಲ. ಇದನ್ನು ಜಾರಿ ಮಾಡುವುದರಿಂದ ಕಾರ್ಮಿಕರು, ಶ್ರಮಿಕರು, ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಮಧ್ಯಮ ವರ್ಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಲಾಕ್‍ಡೌನ್ ಪದವೇ ಅತಿಯಾಗಿ ದುರ್ಬಳಕೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಚಾಚೂತಪ್ಪದೆ ಪಾಲನೆ ಮಾಡಬೇಕು. ಪ್ರತಿಯೊಬ್ಬರೂ ಮಾಸ್ಕ್, ಸ್ಯಾನಿಟೈಜರ್ ಬಳಕೆ ಮಾಡಬೇಕು, ಗುಂಪುಗೂಡುವುದನ್ನು ಮೊದಲು ನಿಲ್ಲಿಸಿ ಎಂದು ಸಲಹೆ ಮಾಡಿದರು. ಕಡ್ಡಾಯವಾಗಿ ಎಲ್ಲರೂ ಕೋವಿಡ್ ಟೆಸ್ಟ್‍ಗೆ ಒಳಗಾಗಬೇಕು. ನನಗೆ ಕೊರೊನಾ ಬಂದಿಲ್ಲ, ನಾನೇಕೆ ಪರೀಕ್ಷೆ ಮಾಡಿಸಿಕೊಳ್ಳಬೇಕು, ಲಸಿಕೆ ಏಕೆ ಹಾಕಿಸಿಕೊಳ್ಳಬೇಕು ಎಂಬ ಉದಾಸೀನ ತೋರುವುದು ಬೇಡ. ಕೊರೊನಾ ಬರಲಿ ಬಿಡಲಿ. ನೀವು ಪರೀಕ್ಷೆ ಮಾಡಿಸುವುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ವಿಶ್ವದಲ್ಲೇ ಭಾರತ ಕೊರೊನಾ ನಿಯಂತ್ರಣ ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಕೋವಿಡ್ ಲಸಿಕೆಯನ್ನು ರಫ್ತು ಮಾಡಬೇಕೆಂಬ ಸದುದ್ದೇಶ ಹೊಂದಿದೆ. ನಮ್ಮಲ್ಲಿ ಎರಡು ಲಸಿಕೆಗಳು ಲಭ್ಯವಿವೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿಕೊಳ್ಳಿ ಎಂದು ಅಶ್ವತ್ಥ ನಾರಾಯಣ್ ಮನವಿ ಮಾಡಿದರು.

Facebook Comments