ಮೆಜೆಸ್ಟಿಕ್‍ ಬಸ್ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.10- ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ ಕೆಂಪೇಗೌಡ ಪ್ರತಿಮೆ ಮಾದರಿಯಲ್ಲೇ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಇಂದಿಲ್ಲಿ ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ನಮಗೆ ಹೆಮ್ಮೆ. ಕೆಂಪೇಗೌಡರು ಅಂದು ಪಾಳೇಗಾರರಾಗಿ ಆಡಳಿತ ಮಾಡಬಹುದಿತ್ತು. ಆದರೆ, ನಗರ ನಿರ್ಮಾಣದಲ್ಲಿ ಅವರ ದೂರದೃಷ್ಟಿ ಇಂದು ಲಕ್ಷಾಂತರ ಜನರಿಗೆ ಬೆಳಕು ನೀಡಿದೆ. ಬೆಂಗಳೂರು ಬಹುದೊಡ್ಡ ನಗರವಾಗಿ ನಿರ್ಮಾಣವಾಗಿದೆ. ಜಾತಿ ಮತ್ತು ವೃತ್ತಿಗೆ ಅನುಗುಣವಾಗಿ ಕಾರ್ಯ ರೂಪಿಸಿದ್ದಾರೆ. 500 ವರ್ಷಗಳ ಬಳಿಕ ನನ್ನನ್ನು ಸ್ಮರಿಸುತ್ತಾರೆ ಎಂದು ಕೆಂಪೇಗೌಡರೇ ನೆನೆಸಿರಲಿಲ್ಲ.

ಇಂದಿಗೂ ಅವರು ಸ್ಮರಣೀಯರಾಗಿರುವುದಕ್ಕೆ ಕಾರಣ ಅವರ ದೂರದೃಷ್ಟಿಯ ಕಾರ್ಯಶೈಲಿ. ಸರ್ವ ಜನಾಂಗಕ್ಕೂ ಅವರು ಮಾಡಿರುವ ಕೆಲಸ ಶ್ಲಾಘನೀಯ ಎಂದರು. ಬೇರೆ ಬೇರೆ ಕಡೆ ನಗರಗಳಿವೆ. ಅವು ಕೇವಲ ಅಲ್ಲಿನ ಜನರಿಗೆ ಇರುತ್ತವೆ. ಆದರೆ, ಬೆಂಗಳೂರು ಮಾತ್ರ ಇಡೀ ಜಗತ್ತಿನ ಜನರಿಗೆ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೆಂಪೇಗೌಡರ ಹೆಸರಿನಲ್ಲಿದೆ. ಅಲ್ಲಿ ಅವರ ಪ್ರತಿಮೆ ಇರಲಿಲ್ಲ.

108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲದೆ, ಬಹುದೊಡ್ಡ ಸೆಂಟ್ರಲ್ ಪಾರ್ಕ್ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಜೀರ್ಣೋದ್ಧಾರದ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಹಿಂದೆ ಕೆಂಪೇಗೌಡರು ಮಾಡುತ್ತಿದ್ದ ಕೆಲಸವನ್ನು ಬಿಬಿಎಂಪಿ ಮೂಲಕ ಮಾಡಲಾಗುತ್ತಿದೆ. ಬೆಂಗಳೂರು ವಿಶ್ವದಲ್ಲೇ ಗಮನ ಸೆಳೆದಿರುವ ನಗರವಾಗಿದೆ. ಪ್ರತಿ ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆ ನೀಡಿ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆಲ್ಲ ಅಡಿಪಾಯ ಹಾಕಿರುವುದು ನಾಡಪ್ರಭು ಕೆಂಪೇಗೌಡರು ಎಂದು ಹೇಳಿದರು.

ಮೇಯರ್ ಗೌತಮ್‍ಕುಮಾರ್ ಮಾತನಾಡಿ, ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕಿತ್ತು. ಆದರೆ, ಕೋವಿಡ್ ಸಂಕಷ್ಟವಿರುವುದರಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.  ನಗರ ನಿರ್ಮಾತೃ ಕೆಂಪೇಗೌಡರು ಸಾಹಸಿ ಮಾರ್ಗದರ್ಶಕರಾಗಿದ್ದಾರೆ. ಅವರ ದೂರದೃಷ್ಟಿಯಿಂದ ಅಂದೇ ಕೆರೆಗಳ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಿದರು. ಕೆಂಪೇಗೌಡರ ಜಯಂತಿ ಅಂಗವಾಗಿ 31 ಜನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೆಂಪೇಗೌಡರ ಜಯಂತಿ ಎಂದರೆ ನಮಗೆ ಸಾಕಷ್ಟು ಸಂಭ್ರಮ. ಇದು ಪಾಲಿಕೆಯ ಹಬ್ಬ. ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಏಪ್ರಿಲ್‍ನಲ್ಲಿ ನಡೆಯಬೇಕಿದ್ದ ಈ ಹಬ್ಬ ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.

ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 31 ಸಾಧಕರನ್ನು ಗೌರವಿಸಿದ್ದೇವೆ ಎಂದು ಹೇಳಿದರು.

ವಿಪಕ್ಷ ನಾಯಕ ವಾಜಿದ್, ಜೆಡಿಎಸ್ ಪಕ್ಷದ ನೇತ್ರಾ ನಾರಾಯಣ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿದ್ದರು. ಡಾ.ಅಸೀಮಾ ಭಾನು, ಡಾ.ತಹಾ ಮತೀನ್, ಸಮಾಜ ಸೇವಕ ಡಾ.ವೆಂಕಟೇಶ್, ನಿತಿನ್, ಸಂಗೀತ ಕ್ಷೇತ್ರದ ರಮ್ಯಾ ವಸಿಷ್ಠ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ವಿಜಯ್ ನಾಯರ್, ನಾಗರಾಜ್, ಸಾಹಿತ್ಯ ಕ್ಷೇತ್ರದ ಸಂತೋಷ್ ತಮ್ಮಯ್ಯ, ಲೆಫ್ಟಿನೆಂಟ್ ಜನರಲ್ ತಿಮ್ಮಯ್ಯ, ಯಶಸ್ವಿನಿ ಶರ್ಮ, ಮೀನಾ ಗಣೇಶ್, ಚುಂಚ ಕಲಾವಿದ ಬಿ.ಕೆ.ಎಸ್.ವರ್ಮ, ಕ್ರೀಡಾ ಕ್ಷೇತ್ರದ ಕಾಮತ್, ನಾರಾಯಣಸ್ವಾಮಿ, ಅಚ್ಚುತಗೌಡ.

ಡಾ.ತಸ್ಲೀಂಮರೀ ಸೈಯದ್, ಸರ್ಕಾರಿ ನೌಕರರಾದ ಡಾ.ಎಚ್.ಸುಬ್ರಹ್ಮಣ್ಯ ಜೋಯಿಸ್, ಸುರೇಶ್, ಶೃತಿ ಜಿ., ವಿದ್ವಾನ್ ಎಚ್.ಎಸ್.ವೇಣುಗೋಪಾಲ್, ರಂಗಭೂಮಿ ಕಲಾವಿದ ಪಿ.ವಿನಯ್‍ಚಂದ್ರ, ರಾಕೇಶ್ ಸಿ.ಆರ್., ಯೋಗ ಪಟು ಮಂಜುನಾಥ್, ನೃತ್ಯಪಟು ಪ್ರಶಾಂತ್ ಗೋಪಾಲ್‍ಶಾಸ್ತ್ರಿ, ಸಾಹಿತಿ ಜಯರಾಂ, ರಂಗಭೂಮಿ ಕಲಾವಿದ ನೊಣವಿನಕೆರೆ ರಾಮಕೃಷ್ಣಯ್ಯ, ಎ.ಎನ್.ಕಲ್ಯಾಣಿ, ವೈದ್ಯಕೀಯ ಕ್ಷೇತ್ರದ ನವೀನ್ ಬೆನಕಪ್ಪ, ನಾಗರತ್ನರಾಜು, ಕೃಷ್ಣಮೂರ್ತಿ ನಾಡಿಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 33 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Facebook Comments