ಡ್ರಗ್ಸ್ ಮಾಫಿಯಾ ಬೇರು ಸಹಿತ ಕಿತ್ತೊಗೆಯಲು ಬದ್ಧ : ಡಿಸಿಎಂ ಅಶ್ವತ್ಥ್ ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಸೆ.12- ರಾಜ್ಯದ ಕಳಂಕಕ್ಕೆ ಕಾರಣವಾದ ಡ್ರಗ್ಸ್ ಮಾಫಿಯಾವನ್ನು ಬೇರು ಸಹಿತ ಕಿತ್ತೊಗೆಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದರು.

ಕಾವೇರಿ ನದಿಯಿಂದ ರಾಮನಗರ ಜಿಲ್ಲೆಗೆ ಕುಡಿಯುವ ನೀರಿನ ಸುಮಾರು 540 ಕೋಟಿ ವೆಚ್ಚದಲ್ಲಿ ಯೋಜನೆ ತಾಲ್ಲೂಕಿನ ನೆಟ್ಕಲ್ ಗ್ರಾಮದ ಬಳಿ ನಡೆಯುತ್ತಿರುವ ಪೈಪ್‍ಲೈನ್ ಯಾರ್ಡ್ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಡ್ರಗ್ಸ್ ದಂಧೆಯನ್ನು ಬೇರು ಸಹಿತ ಕಿತ್ತೊಗೆಯಲು ನಾವು ಬದ್ಧರಾಗಿದ್ದೇವೆ ಎಂದರು.

ಕೇಂದ್ರದ ಸಹಕಾರದೊಂದಿಗೆ ನಾರ್ಕೋಟಿಕ್ಸ್ ಇಲಾಖೆ, ಫೋಲೀಸ್ ಇಲಾಖೆಯ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಗಮನ ನೀಡಿ ಯಾರ್ಯಾರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೋ, ಅವರುಗಳು ಎಷ್ಟೇ ದೊಡ್ಡವರಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದರು.

ಜಗದೀಶ್ ಶೆಟ್ಟರ್ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಆದ್ದರಿಂದಲೇ ಅವರು ರಾಜ್ಯದ ಅಭಿವೃದ್ಧಿ ಕೆಲಸ ಮಾಡಿಸಲು ಹೋಗಿದ್ದಾರೆ. ಈಗಾಗಲೇ ಎಲ್ಲರೂ ಬಿ.ಎಸ್.ಯಡಿಯಾರಪ್ಪ ನಮ್ಮ ನಾಯಕರು ಎಂದು ಸ್ಪಪ್ಟಪಡಿಸಿದ್ದಾರೆ. ಜತೆಗೆ ಉಳಿದ ಅವಧಿಯ ಅಧಿಕಾರದಲ್ಲಿ ಅವರೇ ಮುಂದುವರಿಯಲಿದ್ದಾರೆ ಎಂದರು.

ಸಿಎಂ ಆದ ಮೇಲೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು. ನಾಡಿನ ಅಭಿವೃದ್ಧಿಗೆ ಇದು ಪೂರಕ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ರಹಸ್ಯ ಭೇಟಿ ವಿಚಾರದಲ್ಲಿ ಬೇರೆ ಯಾವುದೇ ದುರುದ್ದೇಶ ಇಲ್ಲ ಎಂದು ಉತ್ತರಿಸಿದರು. ಯಾವುದೇ ಕಾರಣಕ್ಕೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವುದಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿರುವುದರಿಂದ ಇಂತಹ ಊಹಾಫೋಹಗಳಿಗೆ ಕಿವಿಗೊಡದಿರಿ ಎಂದರು.

ಮಾಗಡಿ ಶಾಸಕ ಮಂಜು,ಎಸಿ ಸೂರಜ್, ತಹಸಿಲ್ದಾರ್, ಚಂದ್ರಮಳಿ, ಕಾವೇರಿ ನೀರಾವರಿ ನಿಗಮದ ವಿಜಯ್‍ಕುಮಾರ್, ಬಿಜೆಪಿ ಮುಖಂಡರಾದ ಡಾ.ಕಂಪನೀಗೌಡ, ಅಶೋಕ್‍ಕುಮಾರ್, ಯಮದೂರು ಸಿದ್ದರಾಜು, ನಾಗೇಗೌಡ ಮುಂತಾದವರು ಪಾಲ್ಗೊಂಡಿದ್ದರು.

Facebook Comments