ಮುಂದಿನ ದಿನಗಳಲ್ಲಿ ಸೈಬರ್ ಕಾನೂನಿನಲ್ಲಿ ಸುಧಾರಣೆ : ಡಿಸಿಎಂ ಅಶ್ವತ್ಥ್ ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14- ಸೈಬರ್ ಕಾನೂನಿನಲ್ಲಿ ಸಾಕಷ್ಟು ಸುಧಾರಣೆಗಳು ಮುಂದಿನ ದಿನಗಳಲ್ಲಿ ಬರಲಿವೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70ನೆ ವರ್ಷದ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದ ಅವರು, ದೊಡ್ಡ ಮಟ್ಟದಲ್ಲಿ ಇರುವ ಸೈಬರ್ ಕ್ರೈಂನ್ನು ನಿವಾರಿಸಲು ಸಾಕಷ್ಟು ಸುಧಾರಣೆಗಳನ್ನು ತರಬೇಕಿದೆ.

ಪತ್ರಿಕೋದ್ಯಮ ಕ್ಷೇತ್ರ ಇಂದು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ಸವ ನಾಲ್ಕನೇ ಅಂಗವೆಂದು ಬಿಂಬಿತವಾಗಿರುವ ಪತ್ರಿಕಾ ರಂಗಕ್ಕೆ ಶಕ್ತಿ ತುಂಬ ಬೇಕಿದೆ ಎಂದರು.
ಸಮಾಜದ ರಕ್ಷಣೆ ಮಾಧ್ಯಮದಿಂದ ಆಗಬೇಕಿದೆ. ಪತ್ರಕರ್ತರು ಅಭದ್ರತೆಯ ತೊಳಲಾಟದಲ್ಲಿ ಸಿಲುಕಿದರೆ ಸಮಾಜ ರಕ್ಷಣೆ ಮಾಡುವುದು ಸುಲಭವಲ್ಲ. ಪತ್ರಕರ್ತರು ಸ್ವತಂತ್ರವಾಗಿರಬೇಕು. ಅವರಿಗೆ ಶಕ್ತಿ ತುಂಬುವ ಕೆಲಸ ಸಂಘದ ಮೂಲಕ ಆಗುತ್ತಿದೆ ಎಂದು ಹೇಳಿದರು.

ಸಂಘಕ್ಕೆ ಎಷ್ಟೇ ಶಕ್ತಿ ತುಂಬಿದರೂ ಸಾಲದು. ಶೂನ್ಯ ಬಡ್ಡಿದರಲ್ಲಿ ಸಾಲ ಕೊಡಲು ಆಗದಿದ್ದರೂ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸರ್ಕಾರ ನೆರವಿಗೆ ಬರಲಿದೆ ಎಂದು ಭರವಸೆ ನೀಡಿದರು. ಪತ್ರಕರ್ತರು ನಿವೇಶನ ಪರಿಕಲ್ಪನೆ ಕೈಬಿಟ್ಟು ಫ್ಲಾಟ್‍ಗಳತ್ತ ಚಿಂತನೆ ಹರಿಸಬೇಕು. ಭೂ ಸುಧಾರಣೆ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದರು. ಪತ್ರಕರ್ತರಿಗೆ ಏನೂ ಬೇಕು, ಸಹಕಾರ ಸಂಘಕ್ಕೆ ಯಾವ ಸೌಲಭ್ಯ ಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟರೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪ್ರಜಾಪ್ರಭುತ್ವದ 4ನೆ ಪ್ರಮುಖ ಅಂಗ ಎಂದೇ ಬಿಂಬಿತವಾಗಿರುವ ಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ಕಾಪಾಡುವುದು ಮುಖ್ಯ. ಯಾವ ಸುದ್ದಿ ಬಿತ್ತರಿಸಬೇಕು ಯಾವುದು ಬೇಡ ಎಂಬ ವಿವೇಚನೆ ಇರಬೇಕು. ಸಮಾಜದಲ್ಲಿ ಒಳ್ಳೆಯ ವಾತಾವರಣದಿಂದ ಸಾಮರಸ್ಯ ಮೂಡಬೇಕಿದೆ ಎಂದು ಹೇಳಿದರು.
ಸಹಕಾರ ಸಂಘ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಉತ್ತರ ಕರ್ನಾಟಕದಲ್ಲೂ ಸಂಘದ ಶಾಖೆ ಆರಂಭಿಸಿ ಎಂದು ಸಲಹೆ ಮಾಡಿದ ಶ್ರೀಗಳು ಮಾಧ್ಯಮ ಟ್ವೆಂಟಿ-20 ಸ್ಮರಣ ಸಂಚಿಕೆ ಸಂಗ್ರಹ ಯೋಗ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಮರಣ ಸಂಚಿಕೆ ಸಂಪಾದಕ ರಘುನಾಥ್ ಚ.ಹ. ಮಾತನಾಡಿ, ಪತ್ರಿಕೋದ್ಯಮದ ಆಳ-ಅಗಲ ತಿಳಿಸುವ ಯೋಚನೆಯೊಂದಿಗೆ ಸ್ಮರಣ ಸಂಚಿಕೆ ಹೊರತರಲಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಇದು ಅನುಕೂಲವಾಗಿದ್ದು, ವಾರ್ಷಿಕ ಇಂತಹ ಒಂದೆರಡು ಸಂಚಿಕೆ ಬಿಡುಗಡೆಯಾಗಲಿ ಎಂದು ಅಭಿಪ್ರಾಯಪಟ್ಟರು. ಸಂಘದ ಸಂಸ್ಥಾಪಕ ಸದಸ್ಯರೂ ಆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಸಂಘ ಆರಂಭವಾದಾಗ 50ರೂ. ಷೇರು ಸಂಗ್ರಹಕ್ಕೂ ಕಷ್ಟವಿತ್ತು. ಕಂತಿನ ರೂಪದಲ್ಲಿ ಹಣ ಪಡೆಯಲಾಗಿತ್ತು.

ಈಗ 70 ವರ್ಷಗಳನ್ನು ಪೂರೈಸುತ್ತಿದೆ. ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿ. ನನ್ನನ್ನು ಆ ಕಾರ್ಯಕ್ರಮಕ್ಕೆ ಆಹ್ವಾನಿಸಿ ಎಂದು ಹಾರೈಸಿದರು.ಸ್ಮರಣ ಸಂಚಿಕೆ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ ಅವರು, ಸುದ್ದಿ ರೂಪದ ಜಾಹೀರಾತುಗಳನ್ನು ನಿಲ್ಲಿಸಿ. ಇದರಿಂದ ಜನರು ದಿಕ್ಕುತಪ್ಪುವಂತಾಗುತ್ತದೆ. ಜಾಹೀರಾತು ಜಾಹೀರಾತೇ ಆಗಿರಲಿ ಎಂದು ಹೇಳಿದರು. ಸಂಘದ ಆರಂಭದ ದಿನಗಳಿಂದ ನಡೆದು ಬಂದ ಹಾದಿಯನ್ನು ಅವರು ಮೆಲುಕು ಹಾಕಿದರು.

ಸಂಘದ ನಿರ್ದೇಶಕ ಎ.ಎಂ.ಸುರೇಶ್ ಮಾತನಾಡಿ, ಸರಳ ಬಡ್ಡಿದರದಲ್ಲಿ ಸರ್ಕಾರದಿಂದ 2 ಕೋಟಿ ರೂ. ಸಾಲ ನೀಡಿದರೆ ಅನುಕೂಲವಾಗಲಿದೆ. ವೈದ್ಯಕೀಯ ನೆರವು ನೀಡುವಂತೆ ಅವರು ಮನವಿ ಮಾಡಿದರು.

Facebook Comments