“ಸಚಿವ ರಮೇಶ್ ಜಾರಕಿಹೊಳಿ ಕಿಂಗ್ ಮೇಕರ್ ಅಲ್ಲ”: ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.23- ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ನಾವು ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ಅಸ್ತ್ರ ಬಳಸುತ್ತಿಲ್ಲ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವವರು ಎಂದು ಡಿಸಿಎಂ ಅಶ್ವತ್ಥನಾರಾಯಣ್ ತಿರುಗೇಟು ನೀಡಿದ್ದಾರೆ. ರೋಷನ್ ಬೇಗ್ ಅವರ ಮೇಲೂ ಸಿಬಿಐ ಅಧಿಕಾರಿಗಳು ಕಾನೂನು ಪ್ರಕಾರ ದಾಳಿ ನಡೆಸಿದ್ದಾರೆ. ಅದರ ವಿಚಾರಣೆಯೂ ನ್ಯಾಯ ಸಮ್ಮತವಾಗಿ ನಡೆಯಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಬಗ್ಗೆ ಮುಖ್ಯಮಂತ್ರಿ ಅವರ ತೀರ್ಮಾನವೇ ಅಂತಿಮ ಎಂದು ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಉಳಿದ ಅವಗೂ ಬಿಎಸ್‍ವೈ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಅಶ್ವತ್ಥನಾರಾಯಣ್ ತಿಳಿಸಿದರು.

ಸಚಿವ ರಮೇಶ್ ಜಾರಕಿಹೊಳಿ ಕಿಂಗ್ ಮೇಕರ್ ಅಲ್ಲ. ಅವರು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ತನ್ನ ಸಹೋದ್ಯೋಗಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಕಿಂಗ್ ಮೇಕರ್ ಎಂದು ಕೆಲವರು ತಿಳಿದುಕೊಂಡಿದ್ದಾರಷ್ಟೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಆನ್‍ಲೈನ್ ತರಗತಿಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಭವಿಷ್ಯದ ಪರೀಕ್ಷೆಗಳನ್ನು ಬರೆಯಲೇ ಬೇಕಾಗುವುದು ಎಂದರು. ಇದಕ್ಕೂ ಮುನ್ನ ಅಶ್ವತ್ಥನಾರಾಯಣ್ ಅವರು ತುಮಕೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸಿದರು.

ತುಮಕೂರು ವಿವಿ ಕುಲಪತಿ ಸಿದ್ದೇಗೌಡ, ರಿಜಿಸ್ಟ್ರಾರ್ ಗಂಗಾನಾಯಕ್, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Facebook Comments