ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.12- ಕೋವಿಡ್ ಪರೀಕ್ಷೆಯನ್ನು 8 ರಿಂದ 10 ಸಾವಿರಕ್ಕೆ ಹೆಚ್ಚಿಸಲು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕನಿಷ್ಟ 200 ಜನರಿಗೆ ಲಸಿಕೆ ಹಾಕುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದರು. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಶ್ಚಿಮ ವಲಯದ ಉಸ್ತುವಾರಿಯಾಗಿರುವ ಅವರು ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತರ ಕಚೇರಿಯಲ್ಲಿ ಇಂದು ನಡೆದ ಹಿರಿಯ ಅಧಿಕಾರಿ ಗಳು ಹಾಗೂ ಆರೋಗ್ಯ ತಜ್ಞರ ಸಭೆಯಲ್ಲಿ ಈ ಸೂಚನೆ ನೀಡಿದರು.

ಕೋವಿಡ್ ಸೋಂಕು ಪತ್ತೆ ಹಚ್ಚಲು ಆದ್ಯತೆ ನೀಡಬೇಕು. ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುವ ಪ್ರಮಾಣವನ್ನು ಕೂಡ ಹೆಚ್ಚಳ ಮಾಡಬೇಕು ಎಂದು ಹೇಳಿದರು. ಸೋಂಕು ಪತ್ತೆ ಮಾಡುವುದರಿಂದ ರೋಗ ಹರಡುವಿಕೆ ನಿಯಂತ್ರಣ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು. ಕೋವಿಡ್ ಲಸಿಕೆ ಹಾಕುವುದನ್ನು ತ್ವರಿತಗೊಳಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕನಿಷ್ಟ 200 ಮಂದಿಗಾದರೂ ಲಸಿಕೆ ಹಾಕಬೇಕು. ಈಗ 2ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಇನ್ನು ಏಳೂವರೆ ಲಕ್ಷ ಗುರಿ ತಲುಪಬೇಕಾಗಿದೆ ಎಂದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಘೋಷ್, ಆರೋಗ್ಯಾಧಿಕಾರಿ ಡಾ.ಮನೋಹರ ಹೆಗಡೆ ಸೇರಿದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ತಜ್ಞರು ಪಾಲ್ಗೊಂಡಿದ್ದರು.

Facebook Comments