400 ಬಿಲಿಯನ್ ಸಾಫ್ಟ್ ವೇರ್ ಮಾರುಕಟ್ಟೆ ಗುರಿ : ಡಿಸಿಎಂ ಅಶ್ವತ್ಥ ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19- ಐಟಿ ಮಾರುಕಟ್ಟೆಯಲ್ಲಿ 400 ಬಿಲಿಯನ್ ಕರ್ನಾಟಕದ ಮಾರ್ಕೆಟ್ ರೂಪಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಐಟಿ-ಬಿಟಿ ಸಚಿವ ಡಾ.ಅಶ್ವತ್ಥ ನಾರಾಯಣ್ ತಿಳಿಸಿದರು. ಐಟಿ-ಬಿಟಿ ಸಂಸ್ಥಾಪಕರ ಜತೆ ಆಯೋಜಿಸಿದ್ದ ಸ್ನೇಹಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಇಂದು ಐಟಿ-ಬಿಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ನಾವು ವಿಶ್ವದಲ್ಲಿ ನಾಲ್ಕನೆ ಸ್ಥಾನದಲ್ಲಿದ್ದೇವೆ. ಇದನ್ನು ಇನ್ನೂ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಇಲಾಖೆ ಕಾರ್ಯೋನ್ಮುಖವಾಗಲಿದೆ. ಒಂದು ಟ್ರಿಲಿಯನ್ ಮಾರ್ಕೆಟ್‍ನಲ್ಲಿ ಶೇ.40ರಷ್ಟು ಕರ್ನಾಟಕದ ಪಾಲಿರಬೇಕು ಎಂದು ಹೇಳಿದರು. ಕರ್ನಾಟಕ ಇನೋವೇಷನ್ ಅಥಾರಿಟಿ ಕಾರ್ಯರೂಪಕ್ಕೆ ರಾಜ್ಯ ಮುನ್ನುಡಿ ಬರೆದಿದೆ. ಸ್ಟಾರ್ಟಪ್, ಐಟಿ ಕಾಯ್ದೆಯಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಲಾಗಿದೆ. ಡಿಜಿಟಲ್ ಎಕಾನಮಿ ಶೇ.20ರಷ್ಟಿದ್ದು, 100 ಬಿಲಿಯನ್ ಮಾರ್ಕೆಟ್ ನಮ್ಮ ರಾಜ್ಯದ್ದೇ ಆಗಿದೆ ಎಂದರು.

ವಿಶ್ವಕ್ಕೆ ಅನ್ವಯವಾಗುವಂತಹ ಪರಿಹಾರ ಕೊಡುವ ತಂತ್ರಜ್ಞಾನ ಇದೆ. ಐಟಿ-ಬಿಟಿಯಲ್ಲಿ ಮುನ್ನಲೆಗೆ ಬರಲು ಪ್ರತಿ ರಾಜ್ಯ ಹಾಗೂ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಯಾರು ಮುಂದಿರುತ್ತಾರೋ ಅವರಿಗೆ ಭವಿಷ್ಯವಿರಲಿದೆ ಎಂಬ ಚಿಂತನೆ ಪ್ರಾರಂಭವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ನಡೆದ ಈ ಸ್ನೇಹಕೂಟದಲ್ಲಿ ಐಟಿ-ಬಿಟಿ ಯೋಜನೆಗಳಿಗೆ ಪೂರಕವಾಗುವಂತೆ ಸರ್ಕಾರದ ಸಹಕಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾನೂನಿನಲ್ಲಿ ಬದಲಾವಣೆ ತರುವುದು ಸೇರಿದಂತೆ ಹಲವು ಸುಧಾರಣೆ ತರಲು ನಮ್ಮ ಇಲಾಖೆ ಸಜ್ಜಾಗಿದೆ ಎಂದು ಡಾ.ಅಶ್ವತ್ಥ ನಾರಾಯಣ್ ತಿಳಿಸಿದರು.

Facebook Comments