ಕೋಲಾರ ಜಿಲ್ಲೆ ಕೊರೋನಾ ಸ್ಥಿತಿ ಪರಿಶೀಲಿಸಿದ ಡಿಸಿಎಂ, ಕೊರತೆಯಯಿರುವ ಸಿಬ್ಬಂದಿ ತುರ್ತು ನೇಮಕ್ಕೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೋಲಾರ ಜಿಲ್ಲೆಯ ಕೋವಿಡ್ 19 ಸ್ಥಿತಿಗತಿಗಳ ಬಗ್ಗೆ ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆ ಮಹತ್ವದ ಸಮಾಲೋಚನೆ ನಡೆಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೊರತೆ ಇರುವ ವೈದ್ಯಕೀಯ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.

ಬೆಂಗಳೂರಿಲ್ಲಿ ಬುಧವಾರ ಜಿಲ್ಲಾಧಿಕಾರಿ ಸತ್ಯಭಾಮ, ಜಿಪಂ ಸಿಇಒ ದರ್ಶನ್ ಹಾಗೂ, ಜಿಲ್ಲಾ ಆರೋಗ್ಯಾಧಿಕಾರಿ ವಿಜಯಕುಮಾರ್ ಅವರ ಜತೆ ಜತೆ ವಿಡಿಯೋ ಸಂವಾದ ನಡೆಸಿದರಲ್ಲದೆ, ದಿನೇದಿನೆ ಕೋವಿಡ್ ಸೋಂಕಿತರು ಹೆಚ್ಚುತ್ತಿದ್ದು ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿರುವ ಕೋವಿಡ್ ಸೋಂಕಿತರ ಪ್ರಮಾಣ, ಆಸ್ಪತ್ರೆ ಬೆಡ್ ಗಳು, ಗಂಟಲು ದ್ರವ ಸಂಗ್ರಹ, ಫೀವರ್ ಕ್ಲಿನಿಕ್ಕುಗಳ ನಿರ್ವಹಣೆ, ಆಂಬುಲೆನ್ಸುಗಳ ಸೌಲಭ್ಯ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆಯೂ ಡಿಸಿಎಂ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದರಲ್ಲದೆ, ಅಗತ್ಯವಿರುವ ಸಿಬಂದಿಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್ ಎಂ) ನಿಯಮಗಳಡಿಯಲ್ಲಿ ಕೂಡಲೇ ನೇಮಕ ಮಾಡಿಕೊಳ್ಳಿ ಎಂದು ಹೇಳಿದರು. ಈ ಬಗ್ಗೆ ಸ್ವತಃ ನಾನೇ ಎನ್.ಎಚ್.ಎಂ ಹಿರಿಯ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಸದ್ಯಕ್ಕೆ ಜಿಲ್ಲೆಯಲ್ಲಿ 600 ಬೆಡ್ ಗಳಿದ್ದು, ಇವುಗಳ ನಿರ್ವಹಣೆಗೆ ಕೇವಲ 34 ವೈದ್ಯರು, 54 ನರ್ಸ್ ಗಳು ಮಾತ್ರ ಇರುವ ಬಗ್ಗೆ ಜಿಲ್ಲಾಧಿಕಾರಿ ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ತಕ್ಷಣವೇ ನೇಮಕಾತಿ ಪ್ರಕ್ರಿಯೆಯನ್ನು ಮಾಡಿ ಮುಗಿಸಿ. ಎನ್.ಎಚ್.ಎಂ ಮೂಲಕವೇ ಮೈಕ್ರೋ ಬಯಾಲಿಜಿಸ್ಟ್ ಗಳನ್ನು ಅಗತ್ಯವಿದ್ದಷ್ಟು ನೇಮಿಸಿಕೊಳ್ಳಿ. ಏನಾದರೂ ತುರ್ತು ಇದ್ದರೆ ತಕ್ಷಣ ಗಮನಕ್ಕೆ ತನ್ನಿ ಎಂದು ಅವರು ತಿಳಿಸಿದರು.

ಖಾಸಗಿ ಆಸ್ಪತ್ರೆ ವಿರುದ್ಧ ಡಿಸಿ ದೂರು:

ಕೋಲಾರದ ಹೊರ ವಲಯದಲ್ಲಿರುವ ದೇವರಾಜ ಅರಸು ವೃದ್ಯಕೀಯ ಆಸ್ಪತ್ರೆಯಲ್ಲಿ 1,150 ಬೆಡ್ ಗಳಿದ್ದರೂ ಅವರಿಂದ ಜಿಲ್ಲಾಡಳಿತಕ್ಕೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬ ವಿಷಯವನ್ನು ಜಿಲ್ಲಾಧಿಕಾರಿ, ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅವರು, ಕೋವಿಡ್ ವಿಷಯದಲ್ಲಿ ಯಾವ ಆಸ್ಪತ್ರೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಮತ್ತೆ ನೀವೇ ಹೋಗಿ ಆಡಳಿತ ಮಂಡಳಿ ಜತೆ ಮಾತನಾಡಿ. ಕೊನೆಪಕ್ಷ 300 ಬೆಡ್ ಗಳನ್ನಾದರೂ ಅವರು ನೀಡಲೇಬೇಕು. ಅಗತ್ಯ ಬಿದ್ದರೆ ನಾನೇ ಅವರೊಂದಿಗೆ ಮಾತನಾಡುತ್ತೆನೆಂದು ಹೇಳಿದರು.

ಕೆಜಿಎಫ್ ನಲ್ಲಿ ಸಂಭ್ರಮ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 200 ಬೆಡ್ ಗಳಿದ್ದು, ಅಷ್ಟನ್ನೂ ಕೋವಿಡ್ ಸೋಂಕಿತರಿಗೆ ನೀಡಲು ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಬಂಗಾರಪೇಟೆ, ಕೆಜಿಎಫ್ ಕಡೆ ಸೋಕಿತರು ಕಂಡುಬಂದರೆ ಅಲ್ಲಿಗೆ ಶಿಫ್ಟ್ ಮಾಡುತ್ತೇವೆ ಎಂದು ಅಧಿಕಾರಿಗಳು ಡಿಸಿಎಂ ಗಮನಕ್ಕೆ ತಂದರು.

ತಾಲ್ಲೂಕಿಗೊಂದು ಟ್ರೂನೆಟ್ ಯಂತ್ರ:

ಅತ್ಯಗತ್ಯವಾಗಿ ಬೇಕಾಗಿರುವ ಟ್ರೂನೆಟ್ ಯಂತ್ರಗಳನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಕಿ. ಇದಕ್ಕೆ ಅಗತ್ಯವಾದ ಹಣವನ್ನು ಜಿಲ್ಲೆಯ ಖನಿಜ ನಿಧಿಯಿಂದ ಬಳಸಿ. ಈ ಯಂತ್ರಗಳ ಪರಿಣಾಮಕರಿ ಉಪಯೋಗ ಆಗಬೇಕು ಉಪ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗೆ ಸೂಚನೆ ನೀಡದರು.

ವೈದ್ಯರ ಬಗ್ಗೆ ಮೆಚ್ಚುಗೆ:

ಸೋಂಕಿತ ರಿಗೆ ಆನ್ ಲೈನ್ ಮೂಲಕ ಚಿಕಿತ್ಸೆ ನೀಡುತ್ತಿರುವ ಸರಕಾರಿ ವೈದ್ಯರ ಬಗ್ಗೆ ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ಖಾಸಗಿ ವೈದ್ಯರು ಸೇವೆ ಸಲ್ಲಿಸಬೇಕು. ಅವರು ಕೂಡ ಪಿಪಿಎ ಕಿಟ್ಟುಗಳನ್ನು ಧರಿಸಬೇಕಲ್ಲದೆ, ಕೋವಿಡ್ ಸೋಂಕಿತರನ್ನು ನೋಡುತ್ತಿರುವ ಆ ವೈದ್ಯರಿಗೂ ಕೋವಿಡ್ ವಿಮೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಸರಕಾರದ ನಿಯಮದಂತೆ ಹಣ ಪಾವತಿ ಮಾಡಲಾಗುವುದು. ಈ ಮಾರಿಯನ್ನು ಕೊನೆಗಾಣಿಸಲು ಪ್ರತಿಯೊಬ್ಬರು ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಬೇಕು. ಅದುವರೆಗೂ ಯಾರೂ ವಿಶ್ರಮಿಸುವಂತಿಲ್ಲ. ಸದಾ ಎಚ್ಚರದಿಂದ ಇರಬೇಕು, ತುರ್ತಾಗಿ ಸ್ಪಂದಿಸಬೇಕು ಎಂದು ಡಿಸಿಎಂ ಹೇಳಿದರು.

Facebook Comments

Sri Raghav

Admin