ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ : ಡಿಸಿಎಂ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು/ಬಳ್ಳಾರಿ, ಜೂ.25-ದೇಶದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷವೂ ಎಲ್ಲ ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡಿದೆಯೇ ವಿನಾ ಅವುಗಳಿಗೆ ಪರಿಹಾರ ಕಂಡುಕೊಳ್ಳಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಟೀಕಿಸಿದರು.

ಬಳ್ಳಾರಿ ಬಿಜೆಪಿ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಈ-ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಸರ್ಕಾರದ 7 ವರ್ಷಗಳ ಸಾಧನೆ ವಿಷಯದ ಬಗ್ಗೆ ವರ್ಚುವಲ್ ಮೂಲಕ ಮಾತನಾಡಿದ ಅವರು, ಕಾಂಗ್ರೆಸ್‌ ತನ್ನ ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಸಮಸ್ಯೆಗಳನ್ನು ನಿರಂತರವಾಗಿ ಬದುಕಿರುವಂತೆ ನೋಡಿಕೊಳ್ಳುತ್ತಿತ್ತು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಂಥ ಸಮಸ್ಯೆಗಳಿಗೆ ಚರಮಗೀತೆ ಹಾಡುತ್ತಾ ಬರುತ್ತಿದೆ ಎಂದರು.

ಕಾಶ್ಮೀರ, ರಾಮಮಂದಿರ, ವಲಸಿಗರ ದುಃಸ್ಥಿತಿ, ಉದ್ಯೋಗ, ಕೈಗಾರಿಕೆ, ಆರ್ಥಿಕತೆ, ಮೂಲಸೌಕರ್ಯ, ತೆರಿಗೆ, ಕಪ್ಪುಹಣ ಇತ್ಯಾದಿ ಅಂಶಗಳ ಬಗ್ಗೆ ಕಾಂಗ್ರೆಸ್ ಅದೆಷ್ಟು ಉಪೇಕ್ಷೆ ಮಾಡಿತ್ತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇತಿಹಾಸವೇ ಎಲ್ಲ ಸತ್ಯಗಳನ್ನು ಬಿಚ್ಚಿಡುತ್ತಿದೆ. ಆದರೆ, ಬಿಜೆಪಿ ಸರ್ಕಾರ ಈ ಎಲ್ಲ ಸಮಸ್ಯೆಗಳಿಂದ ದೇಶವನ್ನು ಹೊರತಂದಿದೆ ಎಂದು ಅವರು ಹೇಳಿದರು.

ಒಂದು ಭಾರತ- ಎರಡು ರಾಷ್ಟ್ರ ಎನ್ನುವುದು ಕಾಂಗ್ರೆಸ್‌ ನೀತಿ. ಒಂದೇ ಭಾರತ-ಒಂದೇ ದೇಶ ಎನ್ನುವುದು ಬಿಜೆಪಿಯ ನೀತಿ. ಈ ಕಾರಣಕ್ಕಾಗಿಯೇ ಜಮ್ಮು ಮತ್ತು ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ತೆಗೆಯಲಾಯಿತು. ಈಗ ಕಾಶ್ಮೀರವೂ ಭಾರತದ ಅಂತರ್ಭಾಗ. ಕಾಂಗ್ರೆಸ್‌ಗೆ ಇಂಥ ಇಚ್ಛಾಶಕ್ತಿ ಇರಲಿಲ್ಲ ಎಂದು ಅವರು ಕಿಡಿಕಾರಿದರು. ಈಶಾನ್ಯ ಭಾರತದಲ್ಲೂ ಸಮಸ್ಯೆಗಳ ಸರಮಾಲೆಯೇ ಇತ್ತು. ಬಾಂಗ್ಲಾ ಗಡಿಯಲ್ಲಿ ಒಳನುಸುಳುವಿಕೆ ಮಿತಿ ಮೀರಿತ್ತು.

ಈಗ ಎಲ್ಲವೂ ನಿಂತಿದೆ. ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗುವ ಅಂಶಗಳನ್ನು ಇಟುಕೊಂಡೇ ಕಾಂಗ್ರೆಸ್‌ ರಾಜಕಾರಣ ಮಾಡುತ್ತಾ ಬಂದಿದೆ. ಇಂಥ ರಾಜಕೀಯ ಪ್ರವೃತ್ತಿಗೆ ಮೋದಿ ಅವರು ಇತಿಶ್ರೀ ಹಾಡುತ್ತಿದ್ದಾರೆ. ಇಷ್ಟು ಕಾಶ್ಮೀರ ಒಂದು ವಿಷಯವನ್ನಿಟ್ಟುಕೊಂಡು ಭಾರತದ ಮೇಲೆ ವಾಗ್ದಾಳಿ ನಡೆಸಲಾಗುತ್ತಿತ್ತು. ಈಗ ಜಗತ್ತಿಗೆ ಸತ್ಯದ ಅರಿವಾಗಿದೆ. ಆ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲಬೇಕು ಎಂದು ಡಿಸಿಎಂ ಹೇಳಿದರು.

ಕೋವಿಡ್‌ನಿಂದಲೇ ಸ್ವಾವಲಂಬನೆಯತ್ತ:ಕೋವಿಡ್‌ ಸಂಕಷ್ಟ ಭಾರತಕ್ಕೆ ಬಂದಾಗ ಅದನ್ನೇ ಅವಕಾಶ ಮಾಡಿಕೊಂಡ ಮೋದಿ ಅವರು ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿ ಕೈಗಾರಿಕೆ, ಉತ್ಪಾದನೆ, ಉದ್ಯೋಗ ಸೃಷ್ಠಿಗೆ ಉತ್ತೇಜನ ನೀಡಿದರು. ಕೇವಲ ಒಂದು ಪಿಪಿಇ ಕಿಟ್‌, ಮಾತ್ರೆ, ಔಷಧಿ, ಸ್ಯಾನಿಟೈಸರ್‌ ವಿಷಯದಲ್ಲಿ ಪರ ದೇಶಗಳ ಮೇಲೆ ಅವಲಂಭಿತವಾಗುತ್ತಿದ್ದ ಭಾರತವು ಕೇವಲ ಒಂದೂವರೆ ವರ್ಷದಲ್ಲೇ ಸಂಪೂರ್ಣ ಸ್ವಾವಲಂಭನೆ ಸಾಧಿಸಿತು. ಲಸಿಕೆ ತಯಾರಿಕೆಯಲ್ಲಿ ಜಗತ್ತಿನ ಅಗ್ರಮಾನ್ಯ ದೇಶವಾಗಿ ಹೊರಹೊಮ್ಮಿತು. ಇದು ಭಾರತದ ಸಾಧನೆ ಎಂದು ಡಿಸಿಎಂ ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಚನ್ನಬಸವ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ರಮೇಶ್, ಜಿಲ್ಲಾ ಪ್ರಭಾರಿ ಸಚ್ಚಿದಾನಂದ ಮುಂತಾದವರು ಭಾಗಿಯಾಗಿದ್ದರು.

Facebook Comments