ಮಿಂಟೋ ಆಸ್ಪತ್ರೆಯಲ್ಲಿ ಕಣ್ಣು ಕಳೆದುಕೊಂಡ ಸಂತ್ರಸ್ತರಿಗೆ 3 ಲಕ್ಷ ರೂ. ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಮಿಂಟೋ ಆಸ್ಪತ್ರೆಯಲ್ಲಿ ಜುಲೈ ತಿಂಗಳಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಆದ ತಪ್ಪಿನಿಂದ ಕಣ್ಣು ಕಳೆದವರಿಗೆ ರಾಜ್ಯ ಸರ್ಕಾರ 9 ಲಕ್ಷ ರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ, ಅವರ ನೋವು ಅರ್ಥ ಮಾಡಿಕೊಂಡಿರುವ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ ಎಂದು ಈ ಸಂಬಂಧ ಮಾಧ್ಯಮಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸೋಮವಾರ ಹೇಳಿದ್ದಾರೆ.

“ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ೧೦ ಮಂದಿಗೆ ಸರ್ಕಾರದಿಂದ 3 ಲಕ್ಷ ರೂ. ಪರಿಹಾರ ಧನ ಕೊಡಲಾಗುತ್ತಿದೆ. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ತಪ್ಪಿತಸ್ಥ ಕಂಪನಿಯಿಂದ ಆ ಹಣ ವಸೂಲಿ ಮಾಡಲಾಗುವುದು. ಆದರೆ, ತಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಎಷ್ಟೇ ದುಬಾರಿ ಆದರೂ, ದೃಷ್ಟಿ ಕಳೆದುಕೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವುದು ಸರ್ಕಾರದ ಜವಾಬ್ದಾರಿ. ಈ ವಿಷಯದಲ್ಲಿ ರಾಜಿ ಇಲ್ಲ,” ಎಂದು ಅವರು ತಿಳಿಸಿದ್ದಾರೆ.

“ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಬಳಿಕ ದೃಷ್ಟಿ ಕಳೆದುಕೊಂಡಿರುವ ಪ್ರಕರಣ ಸಂಬಂಧ ಜಯದೇವ ಹೃದ್ರೋಗ ಸಂಸ್ಥೆಯ ಡಾ. ರವೀಂದ್ರ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ಸಮಿತಿಯಿಂದ ಮಾಹಿತಿ ಪಡೆಯಲಾಗಿದೆ.

ಸಂಬಂಧಪಟ್ಟವರ ವಿಚಾರಣೆಯೂ ಆಗಿದೆ. ಔಷಧ ಪೂರೈಸಿದ ಔಷಧ ತಯಾರಿಕಾ ಸಂಸ್ಥೆಯಿಂದ ತಪ್ಪಾಗಿದೆ ಎಂಬ ಮಾಹಿತಿ ಬಂದಿದೆ. ಹಾಗಾಗಿ, ಸಂಬಂಧಪಟ್ಟ ಇಲಾಖೆಗೆ ನೋಟಿಸ್‌ ನೀಡಲಾಗಿದೆ. ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು,” ಎಂದು ಸಚಿವರು ಸ್ಪಷ್ಟಪಡಿಸಿದರು.

ಸಂತ್ರಸ್ತರಿಗೆ ಪರಿಹಾರ ಒದಗಿಸುವ ಜತೆಯಲ್ಲೇ , ಪ್ರತಿಭಟನೆ ವೇಳೆ ವೈದ್ಯರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು. ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

# ವೈದ್ಯರಿಗೆ ಭದ್ರತೆ :
“ಸಂತ್ರಸ್ತರ ಪರ ಪ್ರತಿಭಟನೆ ವೇಳೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಆಡಳಿತ ಮಂಡಳಿಯಿಂದ ಆದ ತಪ್ಪಿಗೆ ವೈದ್ಯ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ಸರಿಯಲ್ಲ.
ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು.

ಹೆಚ್ಚಿನ ರಕ್ಷಣೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆ ನಿಯೋಜಿಸಲಾಗುವುದು. ಕೃತಕ ಬುದ್ಧಿಮತ್ತೆಯಂಥ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಸಿಸಿಟಿವಿ ಅಳವಡಿಸಲಾಗುವುದು. ಇಂಥ ಘಟನೆ ಮರುಕಳಿಸದಂತೆ ಎಚ್ಚರವಹಿಸಲಾಗುವುದು.

ವ್ಯವಸ್ಥೆಯಲ್ಲಿ ಆಗುವ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಲಾಗಿದೆ. ಬೆಂಗಳೂರು ಮಾತ್ರ ಅಲ್ಲ, ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಸುರಕ್ಷಿತ ವಾತಾವರಣ ಸೃಷ್ಟಿಸುತ್ತೇವೆ,” ಎಂದು ಸಚಿವರು ಹೇಳಿದ್ದಾರೆ.

ಜುಲೈ ತಿಂಗಳಲ್ಲಿ 24 ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಆಗಿತ್ತು. ನಂತರ ಕಣ್ಣಿಗೆ ಹಾಕಿದ ಡ್ರಾಪ್‌ನಿಂದ ಸಮಸ್ಯೆ ಆಗಿ, ಕಣ್ಣುಕಳೆದುಕೊಂಡರು. 10 ಜನ ಸಂಪೂರ್ಣವಾಗಿ ಕಣ್ಣಿನ ದೃಷ್ಟಿ ಹೋಗಿದೆ. ಇನ್ನಷ್ಟು ಜನಕ್ಕೆ ದೃಷ್ಟಿ ದೋಷ ಆಗಿದೆ. ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆದಿತ್ತು.

Facebook Comments

Sri Raghav

Admin