ದೇಶಕ್ಕೆ ವಾಪಸಾಗಲು ನೆರವಾದ ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ದುಬೈ ಕನ್ನಡಿಗರಿಂದ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ದೇಶಕ್ಕೆ ವಾಪಸಾಗಲು ವಿಮಾನಯಾನ ಸೌಕರ್ಯ ಕಲ್ಪಿಸಲು ಸಹಕರಿಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರಿಗೆ ದುಬೈ ಕನ್ನಡಿಗರು ವೀಡಿಯೋ ಕಾಲ್ ಮಾಡಿ ಧನ್ಯವಾದ ಹೇಳಿದ್ದಾರೆ.

ಕೊವಿಡ್‌ ಸಂಕಷ್ಟ ಎದುರಾದ ನಂತರ ಮೊದಲ ಬಾರಿಗೆ ದುಬೈನಿಂದ ಹೊರಟ ವಿಮಾನ ಮಂಗಳವಾರ ರಾತ್ರಿ ಮಂಗಳೂರು ತಲುಪಿದೆ. ಈ ಹಿನ್ನೆಲೆಯಲ್ಲಿ ಬುಧವಾರ ವೀಡಿಯೋ ಕಾಲ್‌ ಮಾಡಿದ ಅನಿವಾಸಿ ಕನ್ನಡಿಗರು ಉಪಮುಖ್ಯಂತ್ರಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.

ಕನ್ನಡಿಗ ಹೆಲ್ಪ್‌ ಲೈನ್‌ ಆರಂಭಿಸಿರುವ ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ವೃತ್ತಿಪರರನ್ನೊಳಗೊಂಡ 20 ಜನರ ಸಮಾನ ಮನಸ್ಕರ ತಂಡದ ಜತೆ ಕೆಲ ದಿನಗಳ ಹಿಂದೆ ವೀಡಿಯೋ ಸಂವಾದ ನಡೆಸಿದ್ದ ಡಾ. ಅಶ್ವತ್ಥನಾರಾಯಣ ಅವರು, ದುಬೈ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಅದರಂತೆ, ದುಬೈನಿಂದ ಕರ್ನಾಟಕಕ್ಕೆ ವಿಮಾನ ಸೌಕರ್ಯ ಕಲ್ಪಿಸಿದ ವಿದೇಶಾಂಗ ಸಚಿವಾಲಯ, ನಗ್ಮಾ ಮಲಿಕ್‌ ಅವರನ್ನು ರಾಜ್ಯದ ಸಮನ್ವಯಕಾರರನ್ನಾಗಿ ನೇಮಿಸಿತ್ತು. “ನಮ್ಮ ಕರೆಗೆ ಓಗೊಟ್ಟು ಸ್ಪಂದಿಸಿ, ಕಷ್ಟ ಕಾಲದಲ್ಲಿ ನಮ್ಮ ಜತೆ ಇದ್ದು ಎಲ್ಲ ರೀತಿ ಸಹಕಾರ ನೀಡಿದ ಡಾ. ಅಶ್ವತ್ಥನಾರಾಯಣ ಅವರಿಗೆ ತುಂಬ ಹೃದಯದ ಧನ್ಯವಾದ. ನಿಮ್ಮ ಸಹಕಾರಕ್ಕೆ ನಾವು ಚಿರಋಣಿ,”ಎಂದು ಅನಿವಾಸಿ ಕನ್ನಡಗರ ತಂಡ ಕೃತಜ್ಞತೆ ಹೇಳಿದೆ.

ಸದ್ಯ ಕರ್ನಾಟಕದ ಮೂಲದ 1904 ಮಂದಿ ಯುಎಇಯಲ್ಲಿದ್ದು, ಈ ಪೈಕಿ 121 ಗರ್ಭಿಣಿಯರಿದ್ದಾರೆ. ವೀಸಾ ಅವಧಿ ಮುಗಿದ 522 ನಿರೋದ್ಯೋಗಿಗಳು, 157 ರೋಗಿಗಳು ಇತರ 95 ಮಂದಿ ಇತರೆ ಕಾರಣಗಳಿಂದ ವಾಪಸ್‌ ಬರಲಾರದೆ ಸಂಕಷ್ಟಕ್ಕೆ ಸಿಲುಕಿ ತಾಯ್ನಾಡಿಗೆ ವಾಪಸಾಗಲು ಸರ್ಕಾರದ ನೆರವನ್ನು ಕೋರಿರುತ್ತಾರೆ.

ಅವರನ್ನು ಕರ್ನಾಟಕಕ್ಕೆ ವಾಪಸ್‌ ಕರೆತರಲು ವಿಮಾನ ವ್ಯವಸ್ಥೆ ಮಾಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೈಶಂಕರ್‌ ಅವರಿಗೆ ಬರೆದಿದ್ದ ಪತ್ರದಲ್ಲಿ ಡಾ.ಅಶ್ವತ್ಥನಾರಾಯಣ ಮನವಿ ಮಾಡಿದ್ದರು. ಅದರಂತೆ, ಆದ್ಯತೆ ಮೇರೆಗೆ ಅರಬ್‌ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರಿಗೆ ವಿಮಾನಯಾನ ಸೌಕರ್ಯ ಕಲ್ಪಿಸಲಾಗಿದೆ.

ಕೆಎನ್‌ಆರ್‌ಐ ಅಧ್ಯಕ್ಷರೂ ಆಗಿರುವ ಉದ್ಯಮಿ ಪ್ರವೀಣ್‌ ಶೆಟ್ಟಿ, ಬ್ಯಾರಿ ಚೇಂಬರ್ಸ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಇದಾಯತ್‌, ಕಾನೂನು ಸಲಹೆಗಾರ ಸುನೀಲ್‌, ಉದ್ಯಮಿ ನವೀದ್‌, ಖಾಸಗಿ ಸಂಸ್ಥೆ ಉದ್ಯೋಗಿ ಚಂದ್ರಶೇಖರ್‌ ಲಿಂಗದಹಳ್ಳಿ, ಮೀಡಿಯಾ ಫೋರಂನ ಇಮ್ರಾನ್‌ ಖಾನ್‌, ಭಟ್ಕಳ ಸಮುದಾಯದ ಪ್ರತಿನಿಧಿಯೂಸಫ್‌, ಕನ್ನಡ ಶಿಕ್ಷಕ ಶಶಿಧರ್‌ ನಾಗರಾಜಪ್ಪ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಉಪಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿದರು.

Facebook Comments

Sri Raghav

Admin