ಕರ್ತವ್ಯಕ್ಕೆ ಹಾಜರಾಗದ ಬಿಎಲ್ಒಗಳ ವಿರುದ್ಧ ಕ್ರಮಕ್ಕೆ ಸೂಚನೆ
ಬೆಂಗಳೂರು,ಆ.2- ಪಶ್ಚಿಮ ವಿಭಾಗದಲ್ಲಿ ಕೋವಿಡ್-19 ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ವಿರುದ್ಧ ಅತ್ಯುಗ್ರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಆದೇಶಿಸಿದರಲ್ಲದೆ, ಗುತ್ತಿಗೆ ಆಧಾರಿತ ವೈದ್ಯರ ವೇತನ ಹೆಚ್ಚಿಸುವಂತೆ ಸೂಚಿಸಿದರು.
ನಗರದ ಪಶ್ಚಿಮ ವಲಯದ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ ಅವರು, ಈ ವಿಭಾಗದಲ್ಲಿ ಒಟ್ಟು 7,000 ಬೂತ್ ಮಟ್ಟದ ಅಧಿಕಾರಿಗಳಿದ್ದಾರೆ. ಆ ಪೈಕಿ ಕೇವಲ 1,200 ಅಧಿಕಾರಿಗಳಷ್ಟೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಉಳಿದವರು ಎಲ್ಲಿ? ಎಂದು ಹಿರಿಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬೂತ್ ಮಟ್ಟದ ಅಧಿಕಾರಿಗಳ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಅನೇಕರು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿಕೊಂಡು ಕೂಡ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ.
ಇದು ಅಕ್ಷಮ್ಯ. ಬೂತ್ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಎಎನïಎಂಗಳ ಜತೆ ಸೇರಿ ಕೋವಿಡ್ ಸೋಂಕಿತರನ್ನು ಸಂಪರ್ಕಿಸುವುದು, ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡುವುದೂ, ಜಾಗೃತಿ ಮೂಡಿಸುವುದು ಬಿಎಲ್ ಒಗಳ ಕೆಲಸ.