ಪಾದರಾಯನಪುರದ ಘಟನೆ ಅತ್ಯಂತ ಹೇಯ ಕೃತ್ಯ, ತಪ್ಪಿತಸ್ಥರಿಗೆ ಶಿಕ್ಷೆ ಖಚಿತ : ಡಿಸಿಎಂ ಅಶ್ವತ್ಥನಾರಾಯಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಆಶಾಕಾರ್ಯಕರ್ತರು ಹಾಗೂ ಪೊಲೀಸರ ಮೇಲೆ ಪಾದರಾಯನಪುರದಲ್ಲಿ ನಡೆಸಿರುವ ಹಲ್ಲೆ ಅತ್ಯಂತ ಹೇಯ ಮತ್ತು ಖಂಡನೀಯ ಎಂದಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್‌ ಅಶ್ವತ್ಥನಾರಾಯಣ, ಇದು ಪೂರ್ವಯೋಜಿತ ಕೃತ್ಯ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾದರಾಯನಪುರದಲ್ಲಿ ಪುಂಡಾಟ ನಡೆಸಿರುವ 54ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಗಲಾಟೆ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸುಗ್ರೀವಾಜ್ಞೆ ಕರಡು ಸಿದ್ಧವಾಗಿದ್ದು, ತಪ್ಪಿತಸ್ಥರಿಗೆ 2 ವರ್ಷ ಶಿಕ್ಷೆ ದಂಡ ವಿಧಿಸುವ ಸಾಧ್ಯತೆ ಇದೆ,” ಎಂದು ಹೇಳಿದರು.

“ಪಾದರಾಯನಪುರ ಹಾಟ್ ಸ್ಪಾಟ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಸಾವು ಸಂಭವಿಸಿದೆ. ಅಲ್ಲಿನ ನಿವಾಸಿಗಳಿಗೆ ಕ್ವಾರಂಟೈನ್‌ ಮಾಡುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಅವರು ಕೂಡ ಒಪ್ಪಿದ್ದರು. ಅದರಂತೆ ಸೋಂಕು ಶಂಕಿತರನ್ನು ಕರೆದುಕೊಂಡ ಹೋಗುವ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯ ಎಂಬಂತೆ ಕಾಣುತ್ತಿದೆ,”ಎಂದು ತಿಳಿಸಿದರು.

ಪೊಲೀಸರು, ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಅಂಥವರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆಯನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಗುಂಡಾವರ್ತನೆ ತೋರಿದವರ ವಿಷಯದಲ್ಲಿ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ, ಎಂದು ಸ್ಪಷ್ಟವಾಗಿ ಹೇಳಿರುವ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, “ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸ್ವತಂತ್ರರು. ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವವರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಲಭ್ಯವಿರುವ ಎಲ್ಲ ರೀತಿಯ ಬಲಪ್ರಯೋಗ ಮಾಡಲು ಪೊಲೀಸರಿಗೆ ಮುಕ್ತ ಅವಕಾಶ ಇದೆ ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ” ಎಂದರು.

# ಜಮೀರ್‌ ವರ್ತನೆ ಸರಿ ಅಲ್ಲ
“ಶಾಸಕ ಜಮೀರ್ ಅಹ್ಮದ್ ಖಾನ್ ಅವರು ತಿಳವಳಿಕೆ ಇಲ್ಲದೆ ಹೇಳಿಕೆ ಕೊಡೊದು ತಪ್ಪು. ನನ್ನನ್ನು ಕೇಳದೆ ಪಾದರಾಯನಪುರಕ್ಕೆ ಹೋಗಿದ್ದು ಸರಿಯಲ್ಲ, ಅಲ್ಲಿ ಇರುವವರು ಮುಗ್ದರು ಎಂಬ ಜಮೀರ್‌ ಹೇಳಿಕೆ ಒಪ್ಪಲಾಗದು. ಸೋಂಕಿನ ವಿರುದ್ಧ ಸರ್ಕಾರ ಹಗರಲಿರುಳು ಕೆಲಸ ಮಾಡುತ್ತಿದೆ. ಅದಕ್ಕೆ ಜನರ ಸಹಕಾರವೂ ಬೇಕು. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಸರಿ ಅಲ್ಲ,” ಎಂದು ಹೇಳಿದರು.

# ಸೋಂಕಿಗೆ ಧರ್ಮ ಇಲ್ಲ
“ಕೊರೊನಾ ವಿರುದ್ಧದ ಹೋರಾಟ ಯಾವುದೇ ನಿರ್ದಿಷ್ಟ ಜಾತಿ, ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ. ಸೋಂಕಿಗೆ ಇಂತಹ ಯಾವುದೇ ಬೇಧಬಾವ ಇರುವುದಿಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಶಂಕಿತ ಸೋಂಕಿತರು ಸ್ವ ಇಚ್ಚೆಯಿಂದ ಬಂದು ಕ್ವಾರಂಟೈನ್‌ಗೆ ಒಳಗಾಗಬೇಕು. ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಅಮಾನವೀಯ. ಇಂಥ ಘಟನೆಗಳು ಮರುಕಳಿಸಬಾರದು,”ಎಂದರು.

Facebook Comments

Sri Raghav

Admin