ಕೊರೋನಾ ತಡೆಗೆ ಮನೆಯಲ್ಲಿರುವುದೇ ಮದ್ದು : ಡಿಸಿಎಂ ಗೋವಿಂದ ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ: ಮಾರ್ಚ 30 ಕೋವಿಡ್-19 ಸೋಂಕು ಹರಡುವದನ್ನು ತಡೆಯಬೇಕಾದರೆ ಮನೆಯಿಂದ ಹೊರಗೆ ಬರದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೊಂದೇ ಮದ್ದು ಎಂದು ಉಪ ಮುಖ್ಯಮಂತ್ರಿಗಳಾದ  ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್-19 ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಕೊರೊನಾ ಸೋಂಕಿತರ ಪ್ರಕರಣಗಳು ವರದಿಯಾಗಿರುವದಿಲ್ಲ. ಜಿಲ್ಲೆಯಿಂದ ಈಗಾಗಲೇ ಕಳುಹಿಸಿದಲಾದ ಒಟ್ಟು 11 ಗಂಟಲು ಮಾದರಿಗಳ ವದಿಯಲ್ಲಿ ಎಲ್ಲವೂ ನೆಗೆಟಿವ್ ಎಂದು ದೃಡಪಟ್ಟಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿಯೂ ಕೊರೊನಾ ವೈರಸ್ ಹೆಚ್ಚಾಗಿಲ್ಲ. ನಿಯಂತ್ರಣದಲ್ಲಿದೆ. ಜಮಖಂಡಿಗೂ ಭೇಟಿ ನೀಡಿದ್ದು, ಹೊರಗಡೆ ಬರುವ ಜನರನ್ನು ನೋಡಿ ಬೇಸರವಾಯ್ತು ಎಂದರು. ಅಲ್ಲದೇ ಅನಾವಶ್ಯಕವಾಗಿ ಬೈಕ್‍ಗಳಲ್ಲಿ ತಿರುಗಾಡುತ್ತಿದ್ದು, ಜಮಖಂಡಿಯಲ್ಲಿ 50 ಬೈಕ್‍ಗಳನ್ನು ಜಪ್ತ ಮಾಡಲಾಗಿದೆ. ಅನಗತ್ಯವಾಗಿ ಓಡಾಡುತ್ತಿರುವ ಬೈಕ್‍ಗಳನ್ನು ಜಪ್ತಿಮಾಡಿ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಗಡಿಯ ಚೆಕ್‍ಪೋಸ್ಟಗಳಲ್ಲಿ ಹೊರ ರಾಜ್ಯದಿಂದ ಆಗಮಿಸಿದ ನಿರ್ಗತಿಕ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಗುಳೆ ಹೋದ ಜನರು ಪುನಃ ಜಿಲ್ಲೆಗೆ ಆಗಮಿಸುತ್ತಿದ್ದು, ಅಂತವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಊರ ಹೊರಗಡೆ ಇರುವ ವಸತಿ ನಿಲಯ ಹಾಗೂ ಸಮುದಾಯ ಭವನಗಳನ್ನು ಪರಿಹಾರ ಕೇಂದ್ರ ಹಾಗೂ ಹೋಮ್ ಕ್ವಾರಂಟೈನ್‍ಗಳಿಗಾಗಿ ಮಾಡಿ ಅಂತವರನ್ನು ಅಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಗೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ ಒಟ್ಟು 1695 ಜನರನ್ನು ಪರಿಹಾರ ಕೇಂದ್ರದಲ್ಲಿ ಹೋಮ್ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದರು.

ಪರಿಹಾರ ಕೇಂದ್ರಕ್ಕಾಗಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ 11 ವಿವಿಧ ವಸತಿ ನಿಲಯಗಳನ್ನು ಗುರುತಿಸಲಾಗಿದೆ. ಅದರಲ್ಲಿ ಹೋಮ್ ಕ್ವಾರಂಟೈನ್‍ಗಳಿಗಾಗಿ ಬಾಗಲಕೋಟೆಯ ಪರಿಶಿಷ್ಟ ಜಾತಿ ಪ್ರತಿಭಾನ್ವಿತ ವಸತಿ ಶಾಲೆ, ಮುಧೋಳ ತಾಲೂಕಿನ ಮೆಳ್ಳಿಗೇರಿ ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬೀಳಗಿ ಮೊರಾರ್ಜಿ ವಸತಿ ಶಾಲೆ, ಜಮಖಂಡಿ ತಾಲೂಕಿನ ಹಿಪ್ಪರಗಿ ಮೊರಾರ್ಜಿ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಅದೇ ರೀತಿ ಕೂಲಿಕಾರ್ಮಿಕರು, ವಲಸಿಗಳು, ನಿರ್ಗತಿಕರು, ನಿರಾಶ್ರಿತರಿಗಾಗಿ ಬಾಗಲಕೋಟೆ ತಾಲೂಕಿನ ಬಿಲ್‍ಕೆರೂರಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಮುಧೋಳ ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹುನಗುಂದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಇಲಕಲ್ಲ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಬಾದಾಮಿ ತಾಲೂಕಿನ ಜಾಲಿಹಾಳದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ(ಬಿಸಿಎಂ), ಗುಳೇದಗುಡ್ಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ರಬಕವಿ-ಬನಹಟ್ಟಿಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಸದ ಶ್ರೀ ಪಿ.ಸಿ.ಗದ್ದಿಗೌಡರ ಮಾತನಾಡಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಸಂಸದ ಕ್ಷೇಮಾಭಿವೃದ್ದಿ ಯೋಜನೆಯ ಅನುದಾನದಿಂದ 1 ಕೋಟಿ ರೂ.ಗಳ ನೆರವು ನೀಡಲಾಗಿದೆ. ಅಲ್ಲದೇ ಸಂಸದರ ಒಂದು ತಿಂಗಳ ವೇತನ 1 ಲಕ್ಷ ರೂ.ಗಳನ್ನು ಸಹ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ತಿಳಿಸಿದರು. ಭೀಕರವಾಗಿ ಕಾಡುತ್ತಿರುವ ಕೊರೊನಾ ವೈರಸ್‍ನಿಂದ ಇಡೋ ಜಗತ್ತೆ ತಲ್ಲಣಗೊಂಡು ತೊಂದರೆಗೆ ಒಳಗಾಗಿದೆ. ಇಂತರಹ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅನುಸರಿಸಿ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಿದರು.

ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook Comments

Sri Raghav

Admin