ಸಿದ್ದರಾಮಯ್ಯನವರು ಬಹಿರಂಗ ಚರ್ಚೆ ನಡೆಸಲಿ : ಡಿಸಿಎಂ ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ, ಜ.13-ನೆರೆ, ಬರ ಬಂದಂತಹ ಸಂದರ್ಭದಲ್ಲಿ ಬೇರೆ ಸರ್ಕಾರಗಳಿಗಿಂತ ಮೋದಿ ಸರ್ಕಾರ ಹೆಚ್ಚು ಪರಿಹಾರವನ್ನು ರಾಜ್ಯಕ್ಕೆ ಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರ ಜುಜುಬಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರೇ ಈ ಆರು ವರ್ಷದಲ್ಲಿ ರಾಜ್ಯದಲ್ಲಿ ಹೆಚ್ಚು ಪರಿಹಾರ ನೀಡಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯನವರು ಬಹಿರಂಗ ಚರ್ಚೆ ನಡೆಸಲಿ ಎಂದು ಹೇಳಿದರು. ಪ್ರವಾಹದ ಸಂದರ್ಭದಲ್ಲಿ ಬೆಳೆಗಳು, ಕಟ್ಟಡಗಳು, ರಸ್ತೆಗಳು ಹಾನಿಯಾದ ಸಂದರ್ಭದಲ್ಲಿ ಯಾವುದೇ ಕೇಂದ್ರ ಸರ್ಕಾರ ಮಾರ್ಗಸೂಚಿ ಅನ್ವಯ ಪರಿಹಾರ ನೀಡುತ್ತದೆ. ಆದರೆ ನಮ್ಮ ಕೇಂದ್ರ ಸರ್ಕಾರ ಮಾರ್ಗಸೂಚಿಗಿಂತ ಹೆಚ್ಚು ಪರಿಹಾರವನ್ನು ನೀಡಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರು ನೆಹರೂ, ಇಂದಿರಾಗಾಂಧಿ, ರಾಜೀವ್‍ಗಾಂಧಿ, ನರಸಿಂಹರಾವ್, ಮನ್‍ಮೋಹನ್‍ಸಿಂಗ್ ಅವರ ಕಾಲದಲ್ಲಿ ಪರಿಹಾರ ಬಂದಿತ್ತು, ಈಗೆಷ್ಟು ಪರಿಹಾರ ಬಂದಿದೆ ಎಂಬ ಬಗ್ಗೆ ಹೋಲಿಕೆ ಮಾಡಲಿ. ಜನರನ್ನು ಭಾವನಾತ್ಮಕವಾಗಿ ತಪ್ಪು ದಾರಿಗೆ ಎಳೆದು, ಬಾಯಿಗೆ ಬಂದಂತೆ ಮಾತನಾಡುವುದು ಬೇಡ ಎಂದು ಹೇಳಿದರು.

ಹೆಚ್ಚು ಪರಿಹಾರ ಕೇಳುವುದು ತಪ್ಪಲ್ಲ. ಯಾವ ಸರ್ಕಾರವಾದರೂ ಮಾರ್ಗಸೂಚಿಯನ್ವಯವೇ ಪರಿಹಾರ ಧನವನ್ನು ಮಂಜೂರು ಮಾಡಿದೆ. ಹೆಚ್ಚು ಕೊಟ್ಟಿಲ್ಲ. ಇದನ್ನು ಅವರು ಮನಗಾಣಬೇಕು ಎಂದು ಹೇಳಿದರು.

Facebook Comments