ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ: ಡಿಸಿಎಂ ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.15- ಲೋಕೋಪಯೋಗಿ ಇಲಾಖೆಯ ಎಲ್ಲಾ ಕಾಮಗಾರಿಗಳು ತ್ವರಿತವಾಗಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ಯಾವುದೇ ಅನುದಾನ ಲ್ಯಾಪ್ಸ್ ಆಗಬಾರದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಖಡಕ್ ಎಚ್ಚರಿಕೆ ನೀಡಿದರು. ವಿಕಾಸಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಅನುದಾನ ಲ್ಯಾಪ್ಸ್ ಆಗಬಾರದು. ನ್ಯೂನ್ಯತೆಗಳಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಹೇಳಿದರು.

ಜನವರಿ ಅಂತ್ಯಕ್ಕೆ 6,594 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ 4,675 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಗತಿಯು ಡಿಎಸ್‍ಎಸ್ ತಂತ್ರಾಂಶ ಗಳನ್ವಯ ಕೆಡಿಪಿ ಸಭೆಯ ಆರ್ಥಿಕ ಪ್ರಗತಿಯ ವಿಷಯ ಸೂಚಿಯಲ್ಲಿ ಎ (ಶೇ.93)ಪ್ರವರ್ಗದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಘಟಕಕ್ಕೆ 341 ಕೋಟಿ ರೂ. ಬಿಡುಗಡೆ ಮಾಡಿದ್ದು, 317 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೆಆರ್‍ಡಿಸಿಎಲ್‍ಗೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಶೇ.100ರಷ್ಟು ವೆಚ್ಚ ಮಾಡಲಾಗಿದೆ.

ರಾಜ್ಯ ಹೆದ್ದಾರಿ ಘಟಕದಲ್ಲಿ 333 ಕೋಟಿ ರೂ. ಬಿಡುಗಡೆಯಾಗಿದ್ದು, ಅಷ್ಟೂ ಹಣವನ್ನು ವೆಚ್ಚ ಮಾಡಲಾಗಿದೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ವೇಗಮಿತಿ ಬೋರ್ಡ್‍ಗಳನ್ನು ಅಳವಡಿಸಬೇಕು. ನೂತನ ರಸ್ತೆ ಕಾಮಗಾರಿಗಳನ್ನು ನಿರ್ಮಿಸುವಾಗ ಕನಿಷ್ಠ ಪ್ರಮುಖ ಸ್ಥಳಗಳಲ್ಲಿ ಶಾಲಾ-ಕಾಲೇಜು, ಅಪಘಾತ ವಲಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಹೇಳಿದರು.

ಎಸ್‍ಸಿಪಿ ಮತ್ತು ಟಿಎಸ್‍ಪಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಯಾವುದೆ ಅನುದಾನ ಉಳಿಕೆಯಾದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಮುಖ್ಯ ಎಂಜಿನಿಯರ್‍ಗಳು ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ನಿಯಮಿತವಾಗಿ ಸಭೆ ನಡೆಸಿ ಸಮಗ್ರವಾಗಿ ಚರ್ಚಿಸಬೇಕು. ಮುಖ್ಯ ಎಂಜಿನಿಯರ್‍ಗಳು ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿ ಪ್ರಗತಿ ಪರಿಶೀಲನೆ ನಡೆಸಬೇಕು. ಯಾವುದೇ ಲೋಪವಾದರೆ ಕಾರ್ಯನಿರ್ವಹಣೆ ವರದಿಯಲ್ಲಿ ನಮೂದಿಸಲಾಗುವುದು ಎಂದು ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಬಿ.ಗುರುಪ್ರಸಾದ್, ಮುಖ್ಯ ಎಂಜನಿಯರ್‍ಗಳು, ಅಧೀಕ್ಷಕ ಎಂಜನಿಯರ್‍ಗಳು ಹಾಜರಿದ್ದರು.

Facebook Comments