ರಾಜ್ಯದ ಅಭಿವೃದ್ಧಿಗೆ ದಿವಂಗತ ಕೆ.ಸಿ.ರೆಡ್ಡಿ ಕೊಡುಗೆ ಅಪಾರ : ಡಿಸಿಎಂ ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27- ರಾಜ್ಯದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಕೊಡುಗೆ ಅಪಾರವಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು. ಕೆ.ಸಿ.ರೆಡ್ಡಿ ಅವರ ಪುಣ್ಯ ತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಅವರು ನಾಲ್ಕೂವರೆ ವರ್ಷ ನಡೆಸಿದ ಆಡಳಿತ ಗಮನಾರ್ಹವಾಗಿದೆ. ಅಲ್ಲದೆ ಕೇಂದ್ರ ಸಚಿವರಾಗಿಯೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಮಧ್ಯ ಪ್ರದೇಶದ ರಾಜ್ಯಪಾಲರಾಗಿಯೂ ರೆಡ್ಡಿ ಅವರು ತಮ್ಮದೇ ಆದ ಹೆಜ್ಜೆ ಗುರುತು ದಾಖಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು, ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಿಂದ ಪ್ರಭಾವಿತರಾಗಿದ್ದರು. ಐಟಿಐ, ಎಚ್‍ಎಂಟಿ, ಬಿಎಚ್‍ಇಎಲ್, ಬಿಇಎಂಎಲ್ ಸೇರಿದಂತೆ ರಾಜ್ಯದಲ್ಲಿ ಹಲವು ಕಾರ್ಖಾನೆಗಳ ಸ್ಥಾಪನೆಗೂ ಕಾರಣೀಭೂತರಾಗಿದ್ದರು ಎಂದು ಅವರ ಗುಣಗಾನ ಮಾಡಿದರು.

ಶಿವಮೊಗ್ಗದ ಜಲಪಾತದ ಅಡಿಯಲ್ಲಿ ಮಹಾತ್ಮಗಾಂಧಿ ಹೈಡ್ರೋ ಎಲೆಕ್ಟ್ರಿಕ್ ಸ್ಟೇಷನ್ ಸ್ಥಾಪನೆಯಲ್ಲೂ ಅವರ ಪರಿಶ್ರಮವಿತ್ತು. ರಾಜ್ಯದ ಅಭಿವೃದ್ಧಿಗೆ ಅಪಾರ ಕಾಳಜಿ ಹೊಂದಿದ್ದರು. ರಾಂಚಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ನೈವೇಲಿಯಲ್ಲಿ ಲಿಂಗ್ನೈಟ್ ಕಾರ್ಖಾನೆ ಸ್ಥಾಪನೆಗೂ ಕಾರಣರಾಗಿದ್ದರು. ಅವರ ಆದರ್ಶ, ತತ್ವಗಳು ಸ್ಪೂರ್ತಿದಾಯಕವಾಗಿವೆ ಎಂದು ಶ್ಲಾಘಿಸಿದರು.

Facebook Comments