ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ : ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5-ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಧೋರಣೆ ಖಂಡಿಸಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಲ್ಪಸಂಖ್ಯಾತರನ್ನು, ದೀನದಲಿತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗದಗ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಹಲವು ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯ ದೀನ ದಲಿತರನ್ನು ದಾರಿ ತಪ್ಪಿಸಿ ವೋಟ್ ಬ್ಯಾಂಕ್ ಮಾಡಿಕೊಂಡು ಬಂದಿರುವವರು ತಪ್ಪು ತಿಳುವಳಿಕೆ ಮೂಡಿಸಿ ಭಯದ ವಾತಾವರಣ ಸೃಷ್ಟಿ ಮಾಡುತ್ತಾ ಬಂದಿದ್ದಾರೆ. ಪೌರತ್ವ ಕಾಯ್ದೆ ಜಾರಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ.

ದೇಶದ 130 ಕೋಟಿ ಜನರಿಗೂ ಕಾನೂನು ಪ್ರಕಾರ ಗುರುತಿನ ಚೀಟಿ ಸಿಗುತ್ತದೆ. ವಿನಾಕಾರಣ ಅನ್ಯಾಯವಾಗುತ್ತದೆ ಎಂದು ಹುಯಿಲೆಬ್ಬಿಸುವುದು ತಪ್ಪಾಗುತ್ತದೆ ಎಂದು ಹೇಳಿದರು.
ಯಾರು ಕಾನೂನಿಗೆ, ಸಂವಿಧಾನಕ್ಕೆ ಗೌರವ ಕೊಡುವುದಿಲ್ಲವೋ ಅವರು ದೇಶದ್ರೋಹವೆಸಗಿದಂತೆ. ಪೌರತ್ವ ಕಾಯ್ದೆ ಮಾಜಿ ಪ್ರಧಾನಿ ಮನ್ ಮೋಹನ್‍ಸಿಂಗ್, ರಾಜೀವ್‍ಗಾಂಧಿ, ನೆಹರೂ ಕಾಲದಿಂದಲೂ ಇತ್ತು.

ಅದನ್ನು ನಾವು ಜಾರಿಗೊಳಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯವಾಗುವುದಿಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಗೋವಿಂದ ಕಾರಜೋಳ ಹೇಳಿದರು.

Facebook Comments