ಆಹಾರ ಸಾಮಗ್ರಿ ದುರುಪಯೋಗ ಆರೋಪ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ.29- ಆಹಾರ ಸಾಮಗ್ರಿ ದುರುಪಯೋಗವಾಗುತ್ತಿರುವ ಬಗ್ಗೆ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಉಪ ಮುಖ್ಯಮಂತ್ರಿಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ವಿಕಾಸ ಸೌಧದಲ್ಲಿಂದು ಕಲಬುರ್ಗಿ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ತಪಾಸಣೆ ನಡೆಸದೇ ಯಾವುದೇ ಕಾರಣಕ್ಕೂ ಹೊರ ರಾಜ್ಯಗಳಿಂದ ಬರುವವರನ್ನು ಜಿಲ್ಲೆಗೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದರು.

ಕಲ್ಬುರ್ಗಿ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲದೆ ನುಸುಳುವವರ ಬಗ್ಗೆ ನಿಗಾವಹಿಸಿ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿಡುವಂತೆ ನಿರ್ದೇಶಿಸಿದರು. ಜೇವರ್ಗಿಯಲ್ಲಿ ಹೆಚ್ಚು ಜನರು ಭೀಮಾ ನದಿ ತೀರದ ಮೂಲಕ ಜಿಲ್ಲೆಗೆ ಆಗಮಿಸುತ್ತಿರುವ ಮಾಹಿತಿ ಇದೆ.

ಈ ರೀತಿ ಅನಧಿಕೃತವಾಗಿ ಜಿಲ್ಲೆಗೆ ಪ್ರವೇಶಿಸಿ ತಿರುಗಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ,ಜಿಲ್ಲಾಡಳಿತ ಹಾಗೂ ಪೆÇಲೀಸರು ಹೆಚ್ಚು ನಿಗಾವಹಿಸಬೇಕು. ಯಾವುದೇ ನಿರಾಶ್ರಿತರು, ವಲಸಿಗರು ಹೊರ ಜಿಲ್ಲೆಗಳಿಂದ ಬಂದು ಕ್ವಾರಂಟೈನ್‍ನಲ್ಲಿರುವವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಿ ಎಂದರು.

ಬೇಸಿಗೆಯಿಂದಾಗಿ ಕುಡಿಯುವ ನೀರಿನ ಅಭಾವದ ಸಾಧ್ಯತೆ ಇದೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಉದ್ಯೋಗ ಸಮಸ್ಯೆ ಉಲ್ಭಣವಾಗದಂತೆ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್-19ರ ಹಿನ್ನೆಲೆಯಲ್ಲಿ ಘೋಷಿಸಿದ ಎಲ್ಲಾ ಪರಿಹಾರ ಯೋಜನೆಗಳು ತ್ವರಿತವಾಗಿ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಈಗಾಗಲೇ ಮುಂಗಾರು ಆರಂಭವಾಗಿದ್ದು, ಸೂಕ್ತ ಗೊಬ್ಬರ, ಬೀಜ ವಿತರಿಸಿ, ರೈತರಿಗೆ ಭಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ, ನಕಲಿ ಕಂಪನಿಗಳ ರಸಗೊಬ್ಬರ ಪೂರೈಕೆಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ಕೈಗೊಂಡು ಪ್ರಕರಣವನ್ನು ದಾಖಲಿಬೇಕು ಎಂದು ನಿರ್ದೇಶನ ನೀಡಿದರು.

Facebook Comments