ಟೆಂಡರ್ ಪಡೆದು ಉಪ ಗುತ್ತಿಗೆ ನೀಡುವ ಗುತ್ತಿಗೆದಾರರು ಕಪ್ಪು ಪಟ್ಟಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.3-ಟೆಂಡರ್ ಮೂಲಕ ಕಾಮಗಾರಿ ಗುತ್ತಿಗೆ ಪಡೆದು ಉಪ ಗುತ್ತಿಗೆ ನೀಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ವಿಧಾನಪರಿಷತ್‍ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು. ಪ್ರಶ್ನೋತ್ತರ ಅವಧಯಲ್ಲಿ ಸದಸ್ಯ ಎಂ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಮಗಾರಿಗಳ ಉಪ ಗುತ್ತಿಗೆ ನೀಡುವುದನ್ನು ತಡೆಯಲು ಅಗತ್ಯವಿದ್ದರೆ ಕಾನೂನು ತಂದಾದರೂ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

ಉಪಗುತ್ತಿಗೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಉಪ ಗುತ್ತಿಗೆ ನೀಡಿರುವುದು ಗಮನಕ್ಕೆ ಬಂದರೆ ಲೋಕೋಪಯೋಗಿ ಇಲಾಖೆ ಮುಖ್ಯಸ್ಥರಿಂದ ತನಿಖೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೋವಿಡ್‍ನಿಂದಾಗಿ ಕಾಮಗಾರಿಗಳು ವಿಳಂಬವಾಗಿವೆ. ನಿರ್ದಿಷ್ಟ ಕಾಲಾವಧಿಯಲ್ಲಿ ಕಮಗಾರಿ ಮುಗಿಸದಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸುವುದು ಹಾಗೂ ಟೆಂಡರ್ ವಜಾ ಮಾಡುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿರ್ಮಿತಿ ಕೇಂದ್ರ ಹಾಗೂ ಲ್ಯಾಂಡ್ ಆರ್ಮಿಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲಾಗುವುದು. ದೊಡ್ಡ ಕಾಮಗಾರಿಗಳನ್ನು ಆ ಸಂಸ್ಥೆಗೆ ನೀಡುತ್ತಿಲ್ಲ ಎಂದು ಗೋವಿಂದ ಕಾರಜೋಳ ಹೇಳಿದರು. ಹೊರಗುತ್ತಿಗೆಯಲ್ಲೂ ಮೀಸಲಾತಿ: ಸರ್ಕಾರಿ ಸಂಸ್ಥೆಗಳಲ್ಲಿ ಹೊರ ಗುತ್ತಿಗೆ ಸೇವೆ ಪಡೆಯುವಾಗ ಮೀಸಲಾತಿ ಪಾಲನೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶನೆಗೆ ಗೋವಿಂದ ಕಾರಜೋಳ ತಿಳಿಸಿದರು.

ಲೋಕೋಪಯೋಗಿ , ಜಲ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ಸೇವೆಯನ್ನು ಶಾಶ್ವತವಾಗಿ ವರ್ಗಾವಣೆ ಮಾಡಿದ್ದು, ಇಲಾಖೆಗಳನ್ನ ಬೇರ್ಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಎ ಗುಂಪಿನ 20, ಬಿ ಗುಂಪಿನ 671, ಸಿ ಗುಂಪಿನ 624, ಡಿ ಗುಂಪಿನ 303 ಹುದ್ದೆಗಳು ಖಾಲಿ ಇವೆ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಅಂತಿಮ ತೀರ್ಪು ಬಂದ ನಂತರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಗಳು ತಿಳಿಸಿದರು.

Facebook Comments