ರಾಜ್ಯದಲ್ಲಿ ಮತ್ತೊಂದು ಡಿಸಿಎಂ ಹುದ್ದೆ, ಯಾರಾಗಲಿದ್ದಾರೆ ಹೊಸ ಉಪಮುಖ್ಯಮಂತ್ರಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10- ಈಗಾಗಲೇ ಮೂವರನ್ನು ಉಪಮುಖ್ಯಮಂತ್ರಿ ಮಾಡಿರುವ ಬಿಜೆಪಿಯಲ್ಲಿ ಇದೀಗ ಮತ್ತೊಂದು ಡಿಸಿಎಂ ಹುದ್ದೆ ಹೆಸರು ಕೇಳಿಬರುತ್ತಿದೆ. ಗೋಕಾಕ್‍ನಿಂದ ಗೆದ್ದಿರುವ ರಮೇಶ್ ಜಾರಕಿಹೊಳಿ, ಸಚಿವ ಶ್ರೀರಾಮುಲು ನಡುವೆ ಉಪಮುಖ್ಯಮಂತ್ರಿ ಹುದ್ದೆ ಗಿಟ್ಟಿಸಲು ಪೈಫೋಟಿ ಆರಂಭವಾಗಿದೆ.

ನಾಯಕ ಸಮುದಾಯವು ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ಬೆಂಬಲ ನೀಡಿರುವ ಕಾರಣ ಈ ಸಮುದಾಯಕ್ಕೊಂದು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಸಚಿವ ಸಂಪುಟ ವಿಸ್ತರಣೆಯಾದಾಗ ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಚ್ಚರಿ ಎಂಬಂತೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ವೀರಶೈವ ಸಮುದಾಯದಿಂದ ಡಿಸಿಎಂ ಹುದ್ದೆ ಗಿಟ್ಟಿಸಿದರು.

ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಹಾಗೂ ಒಕ್ಕಲಿಗ ಸಮುದಾಯದಿಂದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕೂಡ ಉಪಮುಖ್ಯಮಂತ್ರಿಯಾದರು. ನಂತರ ನಡೆದ ಬೆಳವಣಿಗೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿತ್ತು. ಇದರ ನಡುವೆ ಗೋಕಾಕ್‍ನಲ್ಲಿ ಅದೇ ಸಮುದಾಯದ ರಮೇಶ್ ಜಾರಕಿಹೊಳಿ ಕೂಡ ಗೆದ್ದು ಬಂದಿರುವುದರಿಂದ ಅವರು ಕೂಡ ಇದೇ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ನಾನು ಚುನಾವಣೆಯಲ್ಲಿ ಗೆದ್ದರೆ ಜಲಸಂಪನ್ಮೂಲ ಜತೆಗೆ ಉಪಮುಖ್ಯಮಂತ್ರಿಯಾಗಲಿದ್ದೇನೆ ಎಂದು ಮತದಾರರಿಗೆ ಹೇಳಿದ್ದರು. ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ಮುಂದೆ ಇನ್ನೊಂದು ಡಿಸಿಎಂ ಹುದ್ದೆ ಸೃಷ್ಟಿಸುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ರಮೇಶ್ ಜಾರಕಿಹೊಳಿ ತಮಗೇ ನೀಡಬೇಕೆಂದು ಪಟ್ಟು ಹಿಡಿದರೆ ವಿಧಿಯಿಲ್ಲದೆ ಅವರನ್ನು ಉಪಮುಖ್ಯಮಂತ್ರಿ ಮಾಡಲೇಬೇಕಾಗುತ್ತದೆ.

ಉಪಚುನಾವಣೆಯಲ್ಲಿ ಶ್ರೀರಾಮುಲುಗೆ ಹುಣಸೂರು ಉಸ್ತುವಾರಿ ನೀಡಲಾಗಿತ್ತು. ಆದರೆ, ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್ ಪರಾಭವಗೊಂಡಿದ್ದಾರೆ. ಇದು ರಾಮುಲುಗೆ ಕೊಂಚ ಹಿನ್ನಡೆ ಉಂಟುಮಾಡಿದೆ. ಆದರೂ ಅವರು ಪ್ರಚಾರ ನಡೆಸಿದ ಚಿಕ್ಕಬಳ್ಳಾಪುರ, ಯಶವಂತಪುರ, ಹಿರೇಕೆರೂರು, ರಾಣೆಬೆನ್ನೂರು ಮತ್ತಿತರ ಕಡೆ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ ಡಿಸಿಎಂ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದು ಜಿಜ್ಞಾಸೆಯಾಗಿದೆ. ದೆಹಲಿಗೆ ತೆರಳಿದ ನಂತರ ಡಿಸಿಎಂ ಸ್ಥಾನ ಬೇಕೇ, ಬೇಡವೆ ಎಂಬುದು ಸಿಎಂ ವರಿಷ್ಠರ ಬಳಿ ಚರ್ಚಿಸಿದ ಮೇಲೆಯೇ ತೀರ್ಮಾನವಾಗಲಿದೆ.

Facebook Comments