ಅಗತ್ಯ ಸೇವೆ ನೀಡುವವರಿಗಾಗಿ ಮಾತ್ರ ಬಿಎಂಟಿಸಿ ಬಸ್ : ಡಿಸಿಎಂ ಸವದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26-ಇಂದಿನಿಂದ ಅಗತ್ಯ ಸೇವೆ ನೀಡುವವರಿಗಾಗಿ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬಿ.ಎಂ.ಟಿ.ಸಿ. ಬಸ್ಸುಗಳು ಕಾರ್ಯನಿರ್ವಹಿಸಲಿದ್ದು,ಪ್ರತಿ ಬಸ್ಸಿನಲ್ಲಿ ಗರಿಷ್ಠ 20 ಜನ ಮಾತ್ರ ಪ್ರಯಾಣಿಸಬಹುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬಿಎಂಟಿಸಿ ಸೇವೆ ಇರೋದು ಜನಸಾಮಾನ್ಯರಿಗಲ್ಲ. ಕೇವಲ ಅವಶ್ಯಕ ಸೇವೆಗಳ ನೌಕರರಿಗೆ ಮಾತ್ರ.‌ ಅಂದರೆ, ವೈದ್ಯರು, ದಾದಿಯರು, ಆಸ್ಪತ್ರೆ ನೌಕರರು, ಸೆಕ್ಯೂರಿಟಿ ಗಾರ್ಡ್‌ಗಳು, ಬ್ಯಾಂಕ್ ಉದ್ಯೋಗಿಗಳು, ಹಾಗೂ ಮಾಧ್ಯಮದವರಿಗೆ ಮಾತ್ರ ಈ ಬಿಎಂಟಿಸಿಯಲ್ಲಿ ಪ್ರಯಾಣಿಸಲು ಅವಕಾಶವಿದೆ.

ಯಾವುದೇ ಕಾರಣಕ್ಕೂ ಮನೆಯಿಂದ ಜನಸಾಮಾನ್ಯರು ಹೊರಗೆ ಬರಬೇಡಿ ಎಂದು ಅವರು‌ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.ಬಸ್ಸನ್ನು ಚಲಾಯಿಸುವ ಎಲ್ಲ ಚಾಲಕ ನಿರ್ವಹಕರುಗಳಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ.ಪ್ರತಿಯೊಂದು ವಾಹನದಲ್ಲಿ 20 ಪ್ರಯಾಣಿಕರ ಸಂಖ್ಯೆ ಮೀರದಂತೆ ಗಮನಹರಿಸುವಂತೆ ಸೂಚಿಸಲಾಗಿದೆ.

ಪೊಲೀಸ್ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ಮೆಡಿಕಲ್ ಶಾಪ್, ಕಾರ್ಪೊರೇಷನ್, ಮೆಟ್ರೋ ಸಿಬ್ಬಂದಿ, ಖಾಸಗಿ ಸೆಕ್ಯೂರಿಟಿ ಗಾರ್ಡ್, ಬ್ಯಾಂಕ್ ಸಿಬ್ಬಂದಿ, ರಕ್ತ ದಾನಿಗಳು, ಅಲ್ಲದೆ ಆಸ್ಪತ್ರೆಗೆ ಭೇಟಿ ನೀಡುವ ನಾಗರೀಕರು, ರೋಗಿಗಳನ್ನು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇವರಲ್ಲದೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರುವ ಅಂಗಡಿ ಕಾರ್ಮಿಕರು, ಡೆಲಿವರಿ ಹುಡುಗರು, ಪೆಟ್ರೋಲ್ ಬಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿಯನ್ನು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದೆಲ್ಲೆಡೆ ಕೊರೊನ ಮಹಾಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಿದೆ.ಇದರ ನಡುವೆ ತುರ್ತು ಸೇವೆಗಳ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬಿಎಂಟಿಸಿ ಯ ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಬಸ್

ಸೇವೆಯು ತುರ್ತು ಸೇವೆಗಳ ಸೌಲಭ್ಯಗಳನ್ನು ಒದಗಿಸುವ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಸೇವೆ ಪಡೆಯಲು ಪೊಲೀಸ್ ಸಂಸ್ಥೆ ವಿತರಿಸಿರುವ ಗುರುತಿನ ಚೀಟಿ ಅತ್ಯಾವಶ್ಯವಾಗಿರುತ್ತದೆ. ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಸಹಕರಿಸಬೇಕೆಂದು ಸವದಿ ಕೋರಿದ್ದಾರೆ.

Facebook Comments

Sri Raghav

Admin