ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ : ಸವದಿ ಹೊಸ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಅ.25-ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬಾಂಬ್ ಸಿಡಿಸಿದ್ದಾರೆ.  ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ಅನರ್ಹರ ಬಗ್ಗೆ ನಾವ್ಯಾಕೆ ಚಿಂತೆ ಮಾಡಬೇಕು, ಅವರ ಬಗ್ಗೆ ನಾವು ಚಿಂತೆ ಮಾಡುವ ಅವಶ್ಯಕತೆ ನಮಗಿಲ್ಲ. ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.

ಅನರ್ಹರು ತಮಗೆ ನ್ಯಾಯಬೇಕೆಂದು, ಕಾಂಗ್ರೆಸ್ ನವರು ತಮಗೆ ನ್ಯಾಯಬೇಕೆಂದು ಕೋರ್ಟ್‍ಗೆ ಹೋಗಿದ್ದಾರೆ. ಇದು ಅವರ ನಡುವಿನ ವ್ಯಾಜ್ಯ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ನಾವ್ಯಾಕೆ ಉತ್ತರಿಸಬೇಕು. ಈ ಕ್ಷಣದವರೆಗೂ ಅನರ್ಹರಿಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಲಕ್ಷ್ಮಣ ಸವದಿಯವರು ಅನರ್ಹರ ಬಗ್ಗೆ ತೀವ್ರ ಅನಾದರ ಹೊಂದಿರುವಂತೆ ಕಾಣುತ್ತಿದೆ. ಈ ಹಿಂದೆ ಅಥಣಿಯ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧವೂ ಚುಚ್ಚು ಮಾತುಗಳನ್ನಾಡಿ ಚರ್ಚೆಗೆ ಗ್ರಾಸವಾಗಿದ್ದರು. ಈಗ ಅನರ್ಹರಿಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ಹಲವು ನಾಯಕರು ಅನರ್ಹ ಶಾಸಕರ ತ್ಯಾಗದಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅವರಿಗೆ ನಾವು ನ್ಯಾಯ ಒದಗಿಸಿಕೊಡುತ್ತೇವೆ ಎಂದು ಈಶ್ವರಪ್ಪ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಆದಿಯಾಗಿ ಈ ಮಾತನ್ನು ಹೇಳಿದ್ದಾರೆ.

ಆದರೆ ಲಕ್ಷ್ಮಣ ಸವದಿ ಯಾಕೋ ಈ ರೀತಿ ಮಾತನಾಡಿದ್ದಾರೆ. ಅನರ್ಹರ್ಯಾರೂ ನಾವು ಬಿಜೆಪಿಗೆ ಬರುತ್ತೇವೆ ಎಂದು ಈವರೆಗೆ ಹೇಳಿಲ್ಲ. ಸುಪ್ರೀಂಕೋರ್ಟ್‍ನಲ್ಲೂ ಕೂಡ ಸರ್ಕಾರದ ಧೋರಣೆ ವಿರೋಧಿಸಿ ನಾವು ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರ ಕುರಿತ ಅರ್ಜಿ ವಿಚಾರಣೆ ಅಂತ್ಯಗೊಂಡು ಸದ್ಯದಲ್ಲೇ ತೀರ್ಪು ಹೊರಬರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿಯವರ ಈ ಮಾತು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments