ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ಬದ್ಧ: ಡಿಸಿಎಂ ಲಕ್ಷ್ಮಣ್ ಸವದಿ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಏ.6- ಸಾರಿಗೆ ನೌಕರರ ವೇತನವನ್ನು ಹೆಚ್ಚಳ ಮಾಡಲು ಸರ್ಕಾರ ಬದ್ಧವಿದ್ದು, ಕೂಡಲೇ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾವು ಆಶ್ವಾಸನೆಯನ್ನು ನೀಡಲು ಸಾಧ್ಯವಿಲ್ಲ. ನೌಕರರ ವೇತನವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಆದರೆ ಎಷ್ಟು ವೇತನ ಹೆಚ್ಚಳ ಮಾಡುತ್ತೇವೆ ಎಂದು ತಕ್ಷಣವೇ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನಿಸಬೇಕು. ಮೊದಲು ನೌಕರರು ಪ್ರತಿಭಟನೆಯನ್ನು ಕೈಬಿಡಲಿ ಎಂದು ತಿಳಿಸಿದರು.

ಇಂದು ಮುಖ್ಯಮಂತ್ರಿಗಳು ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ನೌಕರರು ಮುಂದಿಟ್ಟಿರುವ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಕೊನೆ ಬೇಡಿಕೆ ಈಡೇರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಇದನ್ನು ನೌಕರರು ಅರ್ಥ ಮಾಡಿಕೊಳ್ಳಲಿ ಎಂದು ಒತ್ತಾಯಿಸಿದರು. ಏನೇ ಸಮಸ್ಯೆಗಳಿದ್ದರೂ ಎಲ್ಲರೂ ಒಂದೆಡೆ ಕೂತು ಮಾತುಕತೆ ಮೂಲಕ ಚರ್ಚಿಸಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬಹುದು. ಪ್ರತಿಯೊಂದಕ್ಕೂ ಪ್ರತಿಭಟನೆಯೇ ಪರಿಹಾರವಲ್ಲ. ಸರ್ಕಾರ ನೌಕರರ ಹಿತವನ್ನು ಕಾಪಾಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸವದಿ ಸ್ಪಷ್ಟಪಡಿಸಿದರು.

ಕೊರೊನಾದಂತಹ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಲಿದೆ ಎಂದು ತಜ್ಞರೇ ಎಚ್ಚರಿಸಿದ್ದಾರೆ. ಇಂಥ ಸಂದರ್ಭದಲ್ಲೂ ಪ್ರತಿಭಟನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈಗಾಗಲೇ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಹಣಕಾಸು ಇಲಾಖೆ ಅಧಿಕಾರಿಗಳ ಜೊತೆಯೂ ಮುಖ್ಯಮಂತ್ರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯು ಸರಿಯಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಹಠ ಮಾಡುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಮೇ 4ರವರೆಗೆ ರಾಜ್ಯದಲ್ಲಿ ನೀತಿ ಸಂಹಿತೆ ಇರುವುದರಿಂದ ಯಾವುದೇ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ. ಚುನಾವಣಾ ಆಯೋಗ ಅನುಮತಿ ಕೊಟ್ಟರೆ ಮಾತ್ರ ತೀರ್ಮಾನಿಸುತ್ತೇವೆ ಎಂದು ಹೇಳಿದರು.

ಸಾರಿಗೆ ಇಲಾಖೆ ನಷ್ಟದಲ್ಲಿರುವುದರಿಂದ ನೌಕರರಿಗೆ ತಿಂಗಳ ವೇತನವನ್ನೇ ಕೊಡಲು ಸಾಧ್ಯವಾಗುತ್ತಿಲ್ಲ. ಈಗಲೂ ಕೂಡ ಸರ್ಕಾರದಿಂದ ನಾವು ಸಂಬಳ ನೀಡುತ್ತಿದ್ದೇವೆ. ನಷ್ಟದಲ್ಲಿದ್ದರೂ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿದ್ದೇವೆ. ಇಷ್ಟಾದರೂ ಸರ್ಕಾರದ ವಿರುದ್ಧ ನೀವು ಪ್ರತಿಭಟನೆ ನಡೆಸುವುದು ನ್ಯಾಯಸಮ್ಮತವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಈಗಲೂ ಹೇಳುವುದೇನೆಂದರೆ ನಿಮ್ಮ ಬೇಡಿಕೆಗಳು ಏನೇ ಇದ್ದರೂ ಮಾತುಕತೆಗೆ ಮುಂದೆ ಬನ್ನಿ. ಹಠಮಾರಿ ಧೋರಣೆ ಸರಿಯಲ್ಲ. ಯಾವುದೇ ಬೇಡಿಕೆ ಈಡೇರಿಸಬೇಕಾದರೆ ಸರ್ಕಾರಕ್ಕೂ ಸಮಯ ಬೇಕಾಗುತ್ತದೆ. ನಿಮ್ಮ ಬೇಡಿಕೆಗೆ ನಾವು ಸ್ಪಂದಿಸುತ್ತೇವೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಮುಷ್ಕರ ಮಾಡಬೇಡಿ ಎಂದು ಸವದಿ ಮನವಿ ಮಾಡಿದರು.

Facebook Comments