ಶಬರಿಮಲೆಗೆ ಮಹಿಳೆಯರ ಪ್ರವೇಶ : ಸುಪ್ರೀಂ ತೀರ್ಪು ಕುರಿತು ಡಿಸಿಎಂ ಪರಂ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು, ಸೆ.28- ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್‍ನ ತೀರ್ಪನ್ನು ರಾಜ್ಯ ಸರ್ಕಾರ ಸ್ವಾಗತಿಸಿದ್ದು, ಇದನ್ನು ಐತಿಹಾಸಿಕ ಎಂದು ಬಣ್ಣಿಸಿದೆ. ನಗರದ ಖಾಸಗಿ ಹೋಟೆಲ್‍ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಹಿಳಾ ಸಮಾನತೆಗೆ ಈ ತೀರ್ಪು ಮಹತ್ವದ ವ್ಯಾಖ್ಯಾನ ಒದಗಿಸಿದೆ ಎಂದು ವಿಶ್ಲೇಷಿಸಿದರು.

ಮಹಿಳಾ ಸಬಲೀಕರಣ, ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆ ಇರಬೇಕು ಎಂಬುದು ಎಲ್ಲರ ಅಭಿಪ್ರಾಯ. ಆ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರತಿಯೊಂದು ವಿಷಯದಲ್ಲೂ ಸಮಾನ ಅವಕಾಶ ಸಿಗಬೇಕು. ಅದಕ್ಕಾಗಿ ಸುಪ್ರೀಂಕೋರ್ಟ್‍ನ ತೀರ್ಪು ಸ್ವಾಗತಾರ್ಹ ಎಂದರು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಬಿಬಿಎಂಪಿ ಕಚೇರಿ ಬಳಿ ಮಾತನಾಡಿ, ಇದೊಂದು ಐತಿಹಾಸಿಕ ತೀರ್ಪು, ದೇಶದ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಂತಾಗಿದೆ. ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನಕ್ಕೆ ನಾವು ಚಿರ ಋಣಿ, ತೀರ್ಪು ನೀಡಿದ ನ್ಯಾಯಮೂರ್ತಿ ಗಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಈ ಹಿಂದೆ ಆದ ಘಟನೆಯಿಂದ ಮನಸ್ಸಿಗೆ ನೋವಾಗಿತ್ತು. ಇಡೀ ಹೆಣ್ಣು ಕುಲವೇ ಆ ನೋವಿನಲ್ಲಿ ನಲುಗಿತ್ತು.   ಆಗಲೂ ನಮಗೆ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯ ಸಿಗುವ ವಿಶ್ವಾಸವಿತ್ತು. ಈಗ ಅದು ನಿಜವಾಗಿದೆ. ಸುಪ್ರೀಂಕೋರ್ಟ್ ತೀರ್ಪು ಎಲ್ಲಾ ನೋವನ್ನು ಮರೆಸಿದೆ ಎಂದು ಪ್ರತಿಕ್ರಿಯಿಸಿದರು.

ಡಿಜಿಪಿ ನೀಲಮಣಿ ಎನ್.ರಾಜು ಅವರು ಮಾತನಾಡಿ, ಶಬರಿಮಲೆ ಪ್ರವೇಶ ಕುರಿತು ಸುಪ್ರೀಂಕೋರ್ಟ್ ತೀರ್ಪನ್ನು ಪೂರ್ಣ ಅಧ್ಯಯನ ಮಾಡಿಲ್ಲ. ತೀರ್ಪು ಮಹಿಳೆಯರ ಪರವಾಗಿ ಬಂದಿರುವುದು ಸ್ವಾಗತಾರ್ಹ. ಮಹಿಳೆಯರನ್ನು ತಾರತಮ್ಯದಿಂದ ನೋಡಬಾರದು ಎಂಬ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ನ ಆದೇಶ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.

Facebook Comments

Sri Raghav

Admin