‘ಎಕ್ಸಿಟ್ ಪೋಲ್ ನಿಜವಾದ್ರೆ ಇವಿಎಂ ಮೇಲಿನ ಶಂಕೆ ನಿಜವಾದಂತಾಗುತ್ತದೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ.20- ಚುನಾವಣೋತ್ತರ ಸಮೀಕ್ಷೆಗಳು ಕರಾರುವಕ್ಕಾಗಿಲ್ಲ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಒಂದು ವೇಳೆ ಸಮೀಕ್ಷೆಯ ವರದಿಗಳು ನಿಜವಾದರೆ ಮತಯಂತ್ರಗಳ ಮೇಲಿನ ಶಂಕೆ ನಿಜವಾದಂತಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಸಂಪೂರ್ಣ ಅವಾಸ್ತವಿಕವಾಗಿವೆ. ಕರ್ನಾಟಕದಲ್ಲಿ ಮೈತ್ರಿಕೂಟ ಏಳರಿಂದ ಎಂಟು ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ನಾವು ಊರೂರು ಸುತ್ತಿದ್ದೇವೆ. ನಮಗೆ ವಾಸ್ತವದ ನೆಲೆಗಟ್ಟು ಗೋತ್ತಿದೆ.

ನಮ್ಮ ಅಂದಾಜಿನ ಪ್ರಕಾರ ಕನಿಷ್ಠ 20 ಸ್ಥಾನಗಳನ್ನು ಜೆಡಿಎಸ್-ಕಾಂಗ್ರೆಸ್ ಮಿತ್ರಕೂಟ ಗೆಲ್ಲಲಿದೆ. ಆದರೆ ಸಮೀಕ್ಷೆಯಲ್ಲಿ ಮಿತ್ರಕೂಟ ಏಳು ಸ್ಥಾನ ಗೆಲ್ಲಲಿದೆ ಎಂದಿದೆ. ಇದನ್ನು ನಂಬಲು ಸಾಧ್ಯವೆ, ಬಿಜೆಪಿ 18 ಸ್ಥಾನದಲ್ಲಿ ಗೆಲ್ಲುತ್ತದೆ ಎನ್ನುವ ಸಮೀಕ್ಷೆಯ ಮೇಲೆ ನನಗೆ ವಿಶ್ವಾಸವಿಲ್ಲ. ಸಮೀಕ್ಷೆಗಳು ಒಟ್ಟಾರೆ ಬಿಜೆಪಿ ಪಕ್ಷದ ಅಧ್ಯಕ್ಷರ ಹೇಳಿಕೆಗಳಂತಿವೆ ಎಂದರು.

ಚುನಾವಣೋತ್ತರ ಸಮೀಕ್ಷೆಗಳ ಮೂಲಕ ಬಿಜೆಪಿ 300 ರಿಂದ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿಸಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಕಡೆಯಿಂದ ಬಂದ ವರದಿಗಳನ್ನು ಅವಲೋಕಿಸಿದಾಗ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವುದು ಖಚಿತವಾಗಿದೆ.

ಮತಯಂತ್ರಗಳು ದುರುಪಯೋಗವಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ವಿಪಕ್ಷಗಳು ದೂರು ನೀಡಿದ್ದೇವು. ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತೆಗೆದು ಹಿಂದಿನಂತೆ ಮತಪತ್ರಗಳನ್ನು ಚುನಾವಣೆಯಲ್ಲಿ ಬಳಸಬೇಕು ಎಂದು ಒತ್ತಾಯಿಸಲಾಗಿತ್ತು.

ಅದನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಈಗ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿದರೆ ಅನುಮಾನ ಮೂಡಲಾರಂಭಿಸಲಿದೆ. ಯಾವ ರೀತಿ ಚುನಾವಣೆ ನಡೆಸಿದ್ದಾರೆ ಎಂದು ಅನುಮಾನ ಕಾಡಲಾರಂಭಿಸಿದೆ ಎಂದರು.

ಪಕ್ಷದಲ್ಲಿ ಶಿಸ್ತಿಗೆ ಆದ್ಯತೆ : ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಏನೇ ಬಂದರೂ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಿಲ್ಲ. ರಾಜ್ಯದ ಯಾವ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವಂತೆ ಹೇಳಿಕೆಗಳನ್ನು ನೀಡಬಾರದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಪಕ್ಷದಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈಗಾಗಲೇ ಒಂದು ಸುತ್ತು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಸಭೆ ನಡೆಸಿ ಸಮಾಲೋಚನೆ ಮಾಡಿದ್ದಾರೆ. ಫಲಿತಾಂಶದ ಬಳಿಕ ಮತ್ತೊಂದು ಸುತ್ತಿನ ಸಭೆ ನಡೆಸಿದ ಆಗಿನ ಸಂದರ್ಭಕ್ಕೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ